October 22, 2026
Thursday, October 22, 2026
spot_img

ಶಿವಮೊಗ್ಗ ದಸರಾದಲ್ಲಿ ಆನೆ ಸೋಮಣ್ಣನ ರಂಪಾಟ: ಆರು ತಿಂಗಳ ತರಬೇತಿ ಆಗಿರಲಿಲ್ಲವಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವಮೊಗ್ಗ ದಸರಾದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತಿದ್ದ ಸೋಮಣ್ಣ ಆನೆಯ ರಂಪಾಟದಿಂದಾಗಿ ದೇವಿಯ ವಿಗ್ರಹ ಕೆಳಕ್ಕೆ ಬಿದ್ದು, ಕೈ ಭಾಗ ಕತ್ತರಿಸಿ ಹೋಗಿದೆ. ಸೋಮಣ್ಣ ಆನೆ ದೇವಿಯ ಮೂರ್ತಿಯನ್ನು ಹೊರುವ ಆನೆ ಆಗಿರಲಿಲ್ಲ. ಕಡೆಯ ನಿಮಿಷದಲ್ಲಿ ಆನೆಯ ಬದಲಾವಣೆ ಮಾಡಿದ್ದು ಈ ಅವಾಂತರಕ್ಕೆ ಕಾರಣ ಎಂದು ಹೇಳಲಾಗಿದೆ.

ಮಧ್ಯಾಹ್ನ ಶಿವಪ್ಪನಾಯಕ ಸರ್ಕಲ್‌ನಿಂದ ಆರಂಭವಾದ ಮೆರವಣಿಗೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆಗೆ ಬರುತ್ತಿದ್ದಂತೆಯೇ ಜನಜಂಗುಳಿ ಆರಂಭವಾಗಿದ್ದು, ಜನರ ಗೌಜಿ, ಪಟಾಕಿ ಸದ್ದಿಗೆ ಬೆದರಿದ ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ್ದು, ಕೆಲವು ವಾಹನಗಳಿಗೆ ಹಾನಿಯಾಗಿದೆ. ಸೋಮಣ್ಣನನ್ನು ನಿಯಂತ್ರಣಕ್ಕೆ ತರಲು ಕಷ್ಟಪಟ್ಟ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯರು ಕಡೆಯದಾಗಿ ಅರವಳಿಕೆ ಚುಚ್ಚುಮದ್ದು ನೀಡಿದ್ದಾರೆ.

ಶಾಂತಿಯುತ ಹಾಗೂ ಭಕ್ತಿಯಿಂದ ಸಾಗಬೇಕಿದ್ದ ಮೆರವಣಿಗೆ ಎಲ್ಲರಿಗೂ ಹೆದರಿಕೆಯಾಗುವಂತಹ ಘಟನೆಯಾಗಿತ್ತು. ಕಳೆದ ಆರು ವರ್ಷಗಳಿಂದ ದಸರಾ ಅಂಬಾರಿಯನ್ನು ಸಾಗರ್‌ ಆನೆ ಹೊರುತ್ತಿತ್ತು. ಆದರೆ ಈ ಬಾರಿ ಸೋಮಣ್ಣ ಆನೆಗೆ ಕಡೆಯ ಸಮಯದಲ್ಲಿ ಅವಕಾಶ ನೀಡಲಾಗಿತ್ತು. ಅಂಬಾರಿ ಹೊರುವ ಆನೆಗಳಿಗೆ ಕನಿಷ್ಠ ಆರು ತಿಂಗಳು ತರಬೇತಿ ನೀಡಬೇಕು ಎನ್ನುವ ನಿಯಮವಿದೆ. ಆದರೆ ಸೋಮಣ್ಣನಿಗೆ ಅಷ್ಟೊಂದು ತಯಾರಿ ಆಗಿಲ್ಲ ಎಂದು ಹೇಳಲಾಗಿದೆ. ದಸರಾ ಹಿಂದಿನ ದಿನ ನಡೆದ ಸಭೆಯಲ್ಲಿ ಸಾಗರ್‌ ಬದಲು ಸೋಮಣ್ಣನನ್ನು ಆಯ್ಕೆ ಮಾಡಲಾಗಿದೆ. ಆಯ್ಕೆ ಮಾಡಿದ್ದು ಯಾಕೆ ಎನ್ನುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಮಾಹಿತಿಗಳ ಅನ್ವಯ ಸಾಗರ್‌ ಆನೆಗೆ ಕಾಲುನೋವಿನ ಸಮಸ್ಯೆ ಇರುವ ಕಾರಣ ಈ ಬಾರಿ ಸೋಮಣ್ಣನನ್ನು ಆಯ್ಕೆ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಆನೆ ದಿಕ್ಕಾಪಾಲಾಗಿ ಓಡುವ ವಿಡಿಯೋಗಳು ವೈರಲ್‌ ಆಗಿವೆ. ಜನರ ನಿರ್ಧಾರಗಳಿಂದ ಕಾಡುಪ್ರಾಣಿಗಳಿಗೆ ತೊಂದರೆ ನೀಡುವುದು ತಪ್ಪು ಎಂದು ಕೆಲವರು ಹೇಳಿದರೆ, ಸೋಮಣ್ಣ ಆನೆಗೆ ಸರಿಯಾದ ಟ್ರೈನಿಂಗ್‌ ಇರಲಿಲ್ಲ. ಕೆಲವೊಮ್ಮೆ ತಪ್ಪುಗಳಾಗುತ್ತವೆ, ಅದನ್ನು ದೊಡ್ಡದು ಮಾಡಬಾರದು ಎಂದು ಇತರರು ಹೇಳಿದ್ದಾರೆ.

Must Read