October 22, 2026
Thursday, October 22, 2026
spot_img

ಅವಸರ ಬೇಡ, ಅನುಭವವೇ ಮುಖ್ಯ: ವೈಭವ್‌ಗೆ ಸದ್ಯಕ್ಕಿಲ್ಲ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ರೋಚಕ ಐದು ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಲಿದೆ. ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಈ ಮೊದಲ ರೋಚಕ ಕದನಕ್ಕೂ ಮುನ್ನ, ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ನಡೆಸಿದ ಸುದ್ದಿಗೋಷ್ಠಿ ಈಗ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಪಂದ್ಯದಲ್ಲಿ ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕಣಕ್ಕಿಳಿಯಲಿದ್ದಾರಾ ಎಂಬ ಪ್ರಶ್ನೆಗೆ ನಾಯಕ ಅಯ್ಯರ್ ನೀಡಿರುವ ಉತ್ತರ ಎಲ್ಲರ ಗಮನ ಸೆಳೆದಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಂಡದ ಆರಂಭಿಕ ಜೋಡಿಯಾದ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ ಎಂದು ಬಣ್ಣಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಭಾರತ ತಂಡ ಉಳಿಸಿಕೊಳ್ಳುವಲ್ಲಿ ಈ ಇಬ್ಬರೂ ಆರಂಭಿಕ ಆಟಗಾರರು ಮಹತ್ವದ ಹಾಗೂ ಜವಾಬ್ದಾರಿಯುತ ಪಾತ್ರ ವಹಿಸಿದ್ದರು ಎಂದು ಅಯ್ಯರ್ ಸ್ಮರಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಶ್ರೇಯಸ್ ಅಯ್ಯರ್, “ವೈಭವ್ ಸೂರ್ಯವಂಶಿ ನೇರವಾಗಿ ತಂಡದೊಳಗೆ ಬರುವುದು ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ನಮ್ಮ ಪ್ರಸ್ತುತ ಓಪನರ್‌ಗಳು ಸ್ಥಿರವಾಗಿ ರನ್ ಕಲೆಹಾಕುತ್ತಿದ್ದಾರೆ ಮತ್ತು ನಮಗೆ ವಿಶ್ವಕಪ್ ಗೆದ್ದು ಕೊಟ್ಟಿದ್ದಾರೆ” ಎಂದಿದ್ದಾರೆ.

ಪ್ರತಿಭಾನ್ವಿತ ವೈಭವ್ ಸೂರ್ಯವಂಶಿ ಅವರ ಅದ್ಭುತ ಆಟದ ಬಗ್ಗೆ ಕ್ರಿಕೆಟ್ ಲೋಕದಲ್ಲಿ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಆದರೆ, ಯುವ ಆಟಗಾರನ ಮೇಲೆ ಯಾವುದೇ ಕಾರಣಕ್ಕೂ ಹೆಚ್ಚಿನ ಮಾನಸಿಕ ಒತ್ತಡ ಹೇರಲು ಟೀಮ್ ಮ್ಯಾನೇಜ್‌ಮೆಂಟ್ ಬಯಸುತ್ತಿಲ್ಲ. ವಿದೇಶಿ ಪಿಚ್ ಹಾಗೂ ಪ್ರವಾಸ ಕೈಗೊಳ್ಳುವಾಗ ಡ್ರೆಸ್ಸಿಂಗ್ ರೂಮ್‌ನ ಒಳನೋಟಗಳನ್ನು ಪಡೆದುಕೊಳ್ಳುವುದು, ಹಿರಿಯ ಆಟಗಾರರೊಂದಿಗೆ ಬೆರೆತು ಆಟದ ಸೂಕ್ಷ್ಮತೆಗಳನ್ನು ಮುಕ್ತವಾಗಿ ಕಲಿಯುವುದು ಸದ್ಯಕ್ಕೆ ಹೆಚ್ಚು ಮುಖ್ಯ ಎಂದು ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರತಿಭೆಯನ್ನು ಮೈಗೂಡಿಸಿಕೊಂಡು ತಮ್ಮನ್ನು ತಾವು ಸಾಬೀತುಪಡಿಸಲು ವೈಭವ್ ಸೂರ್ಯವಂಶಿಗೆ ಇನ್ನೂ ಸಾಕಷ್ಟು ಸಮಯವಿದೆ ಎಂದು ಶ್ರೇಯಸ್ ಅಯ್ಯರ್ ಆತ್ಮವಿಶ್ವಸದ ಮಾತುಗಳನ್ನಾಡಿದ್ದಾರೆ. ಒಟ್ಟಿನಲ್ಲಿ, ವೈಭವ್ ಸೂರ್ಯವಂಶಿಗೆ ಸದ್ಯಕ್ಕಂತೂ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಗುವುದಿಲ್ಲ ಎಂಬುದು ಖಚಿತವಾಗಿದ್ದು, ಕಿವೀಸ್ ಕದನದಲ್ಲಿ ಕಣಕ್ಕಿಳಿಯಲು ಯುವ ಆಟಗಾರ ಸ್ವಲ್ಪ ದಿನ ಕಾಯಲೇಬೇಕಿದೆ.

Must Read