October 22, 2026
Thursday, October 22, 2026
spot_img

ಪ್ರಿಯಾಂಕಾ ಗಾಂಧಿ ಪುತ್ರನ ಫೋಟೋ ಪ್ರದರ್ಶನ ‘ನೋ ಐಡಿಯಾ ಈಸ್ ಫೈನಲ್’ಗೆ ಕತ್ತರಿ : 74 ಚಿತ್ರಗಳ ತೆರವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ ನಾಯಕಿ ಪ್ರಯಾಂಕಾ ಗಾಂಧಿ ವಾದ್ರಾ ಅವರ ಪುತ್ರ ಛಾಯಾಗ್ರಾಹಕ ರೆಹಾನ್‌ ವಾದ್ರ ಆಯೋಜಿಸಿದ್ದ ಏಕವ್ಯಕ್ತಿ ಕಲಾ ಪ್ರದರ್ಶನ ಆರಂಭಕ್ಕೂ ಮುನ್ನವೇ ಭಾರಿ ರಾಜಕೀಯ ಮತ್ತು ಸಾಂಸ್ಕೃತಿಕ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿಯ ಪ್ರತಿಷ್ಠಿತ ಬಿಕಾನೆರ್‌ ಹೌಸ್‌ನಲ್ಲಿ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ, ಯುವಕರ ಪ್ರತಿಭಟನೆಗಳನ್ನು ಬಿಂಬಿಸುವ ಒಟ್ಟಾರೆ 74 ಛಾಯಾಚಿತ್ರಗಳನ್ನು ಆಡಳಿತ ಮಂಡಳಿಯು ಬಲವಂತವಾಗಿ ತೆರವುಗೊಳಿಸಿದೆ ಎಂದು ಆರೋಪಿಸಲಾಗಿದೆ.

ನೋ ಐಡಿಯಾ ಈಸ್‌ ಫೈನಲ್‌ ಎನ್ನುವ ಕಾನ್ಸೆಪ್ಟ್‌ನಲ್ಲಿ ರೆಹಾನ್‌ ತಮ್ಮ ಮೂರನೇಯ ಏಕವ್ಯಕ್ತಿ ಕಲಾ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ವನ್ಯಜೀವಿಗಳು, ಕಲೆ ಹಾಗೂ ದೆಹಲಿಯಲ್ಲಿ ನಡೆದ ಯುವ ಚಳವಳಿಗಳ ಫೋಟೊಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಕಾರ್ಯಕ್ರಮಕ್ಕೆ ಇನ್ನೇನು ಒಂದೆರಡು ಗಂಟೆ ಬಾಕಿ ಇರುವಾಗ ಒಟ್ಟಾರೆ 74 ಫೋಟೊಗಳನ್ನು ತೆರವುಗೊಳಿಸಲಾಗಿದೆ.

ಚಿತ್ರಪ್ರದರ್ಶನದ ಮುಕ್ಕಾಲು ಭಾಗವನ್ನು ತೆಗೆದು ಹಾಕಿದ್ದರಿಂದ ಗೋಡೆಗಳು ಖಾಲಿ ಖಾಲಿ ಕಾಣಿಸಿದವು. ಇನ್ನು ಸಂಜೆ ಐದು ಗಂಟೆಯೊಳಗೆ ಫೋಟೊಗಳನ್ನು ತೆಗೆಯದಿದ್ದರೆ ಇಡೀ ಪ್ರದರ್ಶನವನ್ನು ರದ್ದುಗೊಳಿಸುತ್ತೇವೆ ಎಂದು ಬಿಕಾನೆರ್‌ ಹೌಸ್‌ ಆಡಳಿತ ಮಂಡಳಿ ಬೆದರಿಕೆ ಹಾಕಿದೆ. ಈ ಸಮಯದಲ್ಲಿ ಈ ಫೋಟೊಗಳನ್ನು ಪ್ರದರ್ಶನ ಮಾಡುವುದು ತಪ್ಪಾಗುತ್ತದೆ ಎಂದು ಹೇಳಿದ್ದಾಗಿ ರೆಹಾನ್‌ ಮಾಹಿತಿ ನೀಡಿದದ್ದಾರೆ. ತ್ರಿವರ್ಣ ಧ್ವಜವನ್ನು ಒಳಗೊಂಡ ಎರಡು ಛಾಯಾಚಿತ್ರಗಳನ್ನು ತೆಗೆಯುವಂತೆ ಕೇಳಿದರು. ಆದರೆ ಭಾರತೀಯ ಧ್ವಜದ ಚಿತ್ರವನ್ನು ತೆಗೆದುಹಾಕಲು ನಾನು ಖಡಾಖಂಡಿತವಾಗಿ ನಿರಾಕರಿಸಿದೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

Must Read