October 22, 2026
Thursday, October 22, 2026
spot_img

ದಸರಾದಲ್ಲಿ ಸಚಿವರನ್ನು ತಡೆದಿದ್ದು ದಲಿತರಿಗೆ ಆದ ಅವಮಾನ : ಮೈಸೂರು ಎಸ್‌ಪಿ ಅಮಾನತಿಗೆ ಕೈ ಆಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ವೇಳೆ ಸಿಎಂ ಡಿ.ಕೆ. ಶಿವಕುಮಾರ್‌ ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವ ವೇಳೆ ಭದ್ರತಾ ದೃಷ್ಟಿಯಿಂದ ಇತರ ಸಚಿವರನ್ನು ತಡೆಯಲಾಗಿತ್ತು. ಈ ವಿಚಾರ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದ್ದು, ಸಚಿವರನ್ನು ತಡೆದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಅವರನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಸಚಿವರಾದ ಬಿ. ಬಸವಂತಪ್ಪ, ಶಿವರಾಜ ತಂಗಡಗಿ ಹಾಗೂ ಪಿಎಂ. ನರೇಂದ್ರ ಸ್ವಾಮಿ ಸಿಎಂ ಹಿಂಬದಿಯಲ್ಲಿ ಇದ್ದರು. ಮುಖ್ಯಮಂತ್ರಿಗಳು ನಂದಿ ಧ್ವಜ ಪೂಜೆಗೆ ತೆರಳಿದ ವೇಳೆ ಅವರ ಹಿಂದೆ ಸಚಿವರು ಹೊರಟಿದ್ದರು. ಇದಕ್ಕೆ ಎಸ್‌ಪಿ ರಿಷ್ಯಂತ್‌ ಅವಕಾಶ ಮಾಡಿಕೊಟ್ಟಿಲ್ಲ. ವೇಳೆ ಸ್ವಲ್ಪ ಸಮಯ ಸಚಿವರು ಹಾಗೂ ಪೊಲೀಸ್​​ ಅಧಿಕಾರಿಗಳ ನಡುವೆ ಗೊಂದಲ ಉಂಟಾಗಿತ್ತು. ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​​ ಮಧ್ಯಪ್ರವೇಶ ಮಾಡಿ ಅಲ್ಲಿಂದ ಎಲ್ಲ ಸಚಿವರನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಈ ವಿಚಾರ ಕಾಂಗ್ರೆಸ್​​ನಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ದಲಿತ ಸಚಿವರಿಗೆ ಮಾಡಿ ಅವಮಾನ ಎಂಬ ಆರೋಪ ಕೇಳಿ ಬಂದಿದೆ.

ದಲಿತ ಸಚಿವರು ಎನ್ನುವ ಕಾರಣಕ್ಕೆ ಅವರನ್ನು ನಂದಿಧ್ವಜದ ಬಳಿ ಬಿಟ್ಟಿಲ್ಲ. ಹೀಗಾಗಿ ರಿಷ್ಯಂತ್‌ ಅವರನ್ನು ಸೇವೆಯಿಂದ ಸಸ್ಪೆಂಡ್‌ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ. ಸಿಎಂ ಜೊತೆಯಲ್ಲಿದ್ದ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಇನ್ಯಾರಿಗೂ ಒಳಕ್ಕೆ ಹೋಗಲು ಅವಕಾಶ ನೀಡಿಲ್ಲ. ಏಕಾಏಕಿ ತಡೆದು ಸಿಎಂ ಬಿಟ್ಟು ಇನ್ಯಾರಿಗೂ ಪ್ರವೇಶವಿಲ್ಲ ಎಂದು ಹೇಳಿದ್ದಾರೆ. ದಲಿತ ಸಚಿವರು ಎನ್ನುವ ಕಾರಣಕ್ಕೆ ನಮ್ಮನ್ನು ತಡೆದಿದ್ದಾರೆ ಎನ್ನುವುದು ಮಿನಿಸ್ಟರ್‌ಗಳ ವಾದವಾಗಿದೆ. ನಾನು ಮಿನಿಸ್ಟರ್‌ ನಮ್ಮನ್ನು ಯಾಕೆ ತಡೀತಿದ್ದೀರಾ ಎಂದು ಸಚಿವ ನರೇಂದ್ರ ಸ್ವಾಮಿ ಗರಂ ಆಗಿದ್ದರು.

ಕೇವಲ ನಂದಿ ಕಂಬ ಪೂಜೆ ಮಾತ್ರವಲ್ಲದೆ, ಅಂಬಾರಿ ಪುಷ್ಪಾರ್ಚನೆ ವೇಳೆಯೂ ಪ್ರೊಟೋಕಾಲ್ ಉಲ್ಲಂಘನೆಯಾಗಿದೆ ಎಂದು ಆಡಳಿತ ಪಕ್ಷದ ಶಾಸಕರು ಹಾಗೂ ಮುಖಂಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಶಾಸಕ ತನ್ವೀರ್ ಸೇಠ್ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಶ್ರೀವತ್ಸ ಅವರನ್ನು ಸಹ ಹೊರಗಡೆ ನಿಲ್ಲಿಸಲಾಗಿತ್ತು. ನಂತರ ಸಿಎಂ ಮಧ್ಯಪ್ರವೇಶಿಸಿ ತನ್ವೀರ್ ಸೇಠ್ ಅವರನ್ನು ಒಳಗೆ ಕರೆದೊಯ್ದರೆ, ಇತರೆ ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ ಧ್ರುವನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್ ಮತ್ತು ತಿಮ್ಮಯ್ಯ ದೂರದಿಂದಲೇ ಪೂಜೆ ವೀಕ್ಷಿಸುವಂತಾಯಿತು. ಸಾರ್ವಜನಿಕವಾಗಿ ಅವಮಾನ ಆಗಿದೆ ಎನ್ನುವುದು ಕಾಂಗ್ರೆಸ್‌ ದೂರಾಗಿದೆ.

Must Read