ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಪ್ರತಿದಿನ 3,000 ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಶಿಫಾರಸು ಮಾಡಿದೆ. ಮುಂದಿನ 15 ದಿನಗಳ ಅವಧಿಯಲ್ಲಿ ಒಟ್ಟು 3 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆಯೂ ಸಮಿತಿ ಸೂಚಿಸಿದೆ.
ಈ ಬಗ್ಗೆ ಇಂದು ಸಭೆ ನಡೆದಿದ್ದು, ತಮಿಳುನಾಡು ಹಾಗೂ ಕರ್ನಾಟಕದ ಜಲಾಶಯಗಳ ನೀರಿನ ಲಭ್ಯತೆ ಬಗ್ಗೆ ಮಾಹಿತಿ ಪಡೆಯಲಾಯಿತು. ಈವರೆಗೆ ಕರ್ನಾಟಕ ನೀರನ್ನು ಸಂಪೂರ್ಣವಾಗಿ ಹರಿಬಿಟ್ಟಿಲ್ಲ ಎಂದು ತಮಿಳುನಾಡು ಆಕ್ಷೇಪ ಮಾಡಿದ್ದು, ಈಗಾಗಲೇ ಕಾವೇರಿ ನದಿಯ ಮೂಲಕ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗಿದೆ ಕರ್ನಾಟಕ ಹೇಳಿದೆ.
ರಾಜ್ಯದಲ್ಲಿ ಮಳೆಯ ಕೊರತೆಯಿಂದ ಜಲಾಶಯಗಳ ನೀರಿನ ಮಟ್ಟ ಕುಸಿದಿದ್ದು, ಈ ಪರಿಸ್ಥಿತಿಯಲ್ಲಿ ಮತ್ತಷ್ಟು ನೀರು ಬಿಡುಗಡೆ ಮಾಡುವುದು ಕಷ್ಟಕರವಾಗಿದೆ ಎಂದು ತನ್ನ ವಾದವನ್ನು ಮಂಡಿಸಿತು.
ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ಸಮಿತಿ, ತಮಿಳುನಾಡಿಗೆ ಪ್ರತಿದಿನ 3,000 ಕ್ಯುಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದ್ದು, 15 ದಿನಗಳ ಅವಧಿಯಲ್ಲಿ ಒಟ್ಟು 3 ಟಿಎಂಸಿ ಅಡಿ ನೀರು ಹರಿಸುವಂತೆಯೂ ಸೂಚನೆ ನೀಡಿದೆ.



