ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ಸ್ಯಾಂಡಲ್ವುಡ್ನ ‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ ಬಗ್ಗೆ ಈಗಿನಿಂದಲೇ ಭಾರಿ ಕುತೂಹಲ ಮೂಡಿದೆ. ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆಯಲು ಹೊರಟಿರುವ ಈ ದೃಶ್ಯ ವೈಭವದ ಸಿನಿಮಾದ ಬಿಡುಗಡೆಗೆ ಸಂಬಂಧಿಸಿದಂತೆ ಇದೀಗ ಒಂದು ಮುಖ್ಯವಾದ ಅಪ್ಡೇಟ್ ಹೊರಬಿದ್ದಿದೆ.
ಯೋಜನೆಯಂತೆಯೇ ಚಿತ್ರತಂಡವು ‘ರಾಮಾಯಣ’ವನ್ನು ಎರಡು ಭಾಗಗಳಲ್ಲಿ ತೆರೆಗೆ ತರಲು ನಿರ್ಧರಿಸಿದೆ. ಇದರ ಮೊದಲ ಭಾಗವು ಅಂದುಕೊಂಡಂತೆ ದೀಪಾವಳಿಯ ಶುಭ ಸಂದರ್ಭದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆದರೆ, ಎರಡನೇ ಭಾಗದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ‘ರಾಮಾಯಣ 2’ ಚಿತ್ರವು 2027ರ ಬದಲು 2028ರ ದೀಪಾವಳಿಗೆ ಪ್ರದರ್ಶನಗೊಳ್ಳಲಿದೆ.
ಸುಮಾರು 4000 ಕೋಟಿ ರೂಪಾಯಿಗಳ ಅತ್ಯಂತ ಬೃಹತ್ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ. ಹೀಗಾಗಿ, ಚಿತ್ರದ ದೃಶ್ಯ ವೈಭವ ಹಾಗೂ ಗುಣಮಟ್ಟದ ವಿಚಾರದಲ್ಲಿ ಅವರು ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಿದ್ಧರಿಲ್ಲ.
ರಾಮಾಯಣ ಕಥೆಯ ಅಸಲಿ ರೋಮಾಂಚನಕಾರಿ ಯುದ್ಧದ ಸನ್ನಿವೇಶಗಳು ಮತ್ತು ಆಕ್ಷನ್ ದೃಶ್ಯಗಳು ಬರುವುದೇ ಎರಡನೇ ಭಾಗದಲ್ಲಿ. ಈ ಮಹಾ ಯುದ್ಧದ ದೃಶ್ಯಗಳ ಸಂಯೋಜನೆ, ಬೃಹತ್ ಸೆಟ್ಗಳ ನಿರ್ಮಾಣ ಹಾಗೂ ಅತ್ಯಾಧುನಿಕ ಗ್ರಾಫಿಕ್ಸ್ ಕೆಲಸಗಳಿಗೆ ಹೆಚ್ಚಿನ ಸಮಯದ ಅಗತ್ಯವಿದೆ. ಪ್ರಪಂಚದ ನುರಿತ ತಂತ್ರಜ್ಞರು ಈ ಚಿತ್ರಕ್ಕಾಗಿ ಶ್ರಮಿಸುತ್ತಿದ್ದು, ಅತ್ಯುತ್ತಮ ಅನುಭವ ನೀಡಲು ಸಮಯ ತೆಗೆದುಕೊಳ್ಳಲಾಗುತ್ತಿದೆ.
‘ರಾಮಾಯಣ 1’ ಕೊನೆಯಲ್ಲಿ ಎರಡನೇ ಭಾಗದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ನಿರ್ಮಾಪಕರು ಯೋಜಿಸಿದ್ದು, ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತವಾಗಿದೆ.



