October 24, 2026
Saturday, October 24, 2026
spot_img

ಮನೆಯಲ್ಲಿ ಚಿರತೆಯ10 ಉಗುರುಗಳು ಪತ್ತೆ: ಅರಣ್ಯ ಇಲಾಖೆ ಬಲೆಗೆ ಬಿದ್ದ ವ್ಯಕ್ತಿ

ಹೊಸದಿಗಂತ ವರದಿ ಬನವಾಸಿ:

ಮನೆಯಲ್ಲೇ ಅಕ್ರಮವಾಗಿ ಚಿರತೆಯ 10 ಉಗುರುಗಳನ್ನು ಸಂಗ್ರಹಿಸಿಟ್ಟಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವ್ಯಕ್ತಿಯೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಮೀಪದ ಕಲ್ಲಿ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

2026ರ ಅಕ್ಟೋಬರ್ 22ರಂದು ಕಲ್ಲಿ ಗ್ರಾಮದ ಅರಣ್ಯ ಸರ್ವೆ ನಂಬರ್ 80ರ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಚಿರತೆಯ ಉಗುರುಗಳನ್ನು ಅನಧಿಕೃತವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದಾಗ, ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಚಿರತೆಯ 10 ಉಗುರುಗಳು ಪತ್ತೆಯಾಗಿವೆ ಎಂದು ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಂಬಳೆಕೊಪ್ಪ ಗ್ರಾಮದ ಲಕ್ಷ್ಮಣ ಶೇಷಪ್ಪ ನಾಯ್ಕ (36) ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಅವರನ್ನು ಶಿರಸಿಯ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ

ವನ್ಯಜೀವಿ ಸಂರಕ್ಷಣಾ ಕಾಯ್ದೆ–1972ರ ಸೆಕ್ಷನ್ 9 ಮತ್ತು 39 ಸೇರಿದಂತೆ ಸಂಬಂಧಿತ ಕಾನೂನು ವಿಧಿಗಳ ಉಲ್ಲಂಘನೆಯ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ವನ್ಯಜೀವಿಗಳ ಅಂಗಾಂಗಗಳನ್ನು ಅಕ್ರಮವಾಗಿ ಸಂಗ್ರಹಿಸುವುದು ಮತ್ತು ಅವುಗಳ ವ್ಯಾಪಾರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ತಡೆಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ವನ್ಯಜೀವಿಗಳ ಸಂರಕ್ಷಣೆ ಹಾಗೂ ಅಕ್ರಮ ಚಟುವಟಿಕೆಗಳ ನಿಯಂತ್ರಣದ ದೃಷ್ಟಿಯಿಂದ ಈ ಪ್ರಕರಣ ಮಹತ್ವ ಪಡೆದಿದೆ. ವಶಪಡಿಸಿಕೊಂಡ ಉಗುರುಗಳ ಮೂಲ ಮತ್ತು ಅವುಗಳನ್ನು ಸಂಗ್ರಹಿಸಿಟ್ಟಿದ್ದ ಉದ್ದೇಶದ ಕುರಿತು ಮುಂದಿನ ತನಿಖೆಯಲ್ಲಿ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Must Read