ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 5 ಪಂದ್ಯಗಳ ರೋಚಕ ಟಿ20 ಕ್ರಿಕೆಟ್ ಸರಣಿಯಲ್ಲಿ ಕಿವೀಸ್ ಪಡೆ ಸದ್ಯ 0-2 ಅಂತರದಿಂದ ಹಿನ್ನಡೆಯಲ್ಲಿದೆ. ಸರಣಿ ಉಳಿಸಿಕೊಳ್ಳಲು ಹಾಗೂ ಸೋಲಿನ ಸುಳಿಯಿಂದ ಪಾರಾಗಲು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಇದೀಗ ಮಹತ್ವದ ಬದಲಾವಣೆಗಳಿಗೆ ಮುಂದಾಗಿದೆ. ತಂಡದ ಪ್ರಮುಖ ಆಟಗಾರರು ಗಾಯದ ಸಮಸ್ಯೆ ಹಾಗೂ ಅತಿಯಾದ ವರ್ಕ್‌ಲೋಡ್ ನಿಂದ ಬಳಲುತ್ತಿರುವುದರಿಂದ, ಪ್ರಮುಖ ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.
ಎರಡನೇ ಟಿ20 ಪಂದ್ಯದ ವೇಳೆ ಗಾಯಗೊಂಡ ವೇಗಿ ಮ್ಯಾಟ್ ಹೆನ್ರಿ ಕಾಲಿನ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಇಡೀ ಟಿ20 ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇವರ ಜತೆಗೆ ಫಿಟ್‌ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಲಾಕಿ ಫರ್ಗುಸನ್ ಅವರಿಗೆ 3ನೇ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದ್ದು, ಕೊನೆಯ ಎರಡು ಪಂದ್ಯಗಳಿಗೆ ಅವರು ವಾಪಸಾಗುವ ನಿರೀಕ್ಷೆಯಿದೆ. ಮತ್ತೊಂದೆಡೆ, ಮ್ಯಾಕ್ ಚಾಪ್‌ಮನ್ ಗಾಯದ ಕಾರಣದಿಂದ ಇಡೀ ಸರಣಿಗೆ ಅಲಭ್ಯರಾಗಿದ್ದಾರೆ. ಕೈಲ್ ಜೇಮಿಸನ್ ದೇಶಿ ಕ್ರಿಕೆಟ್ ಆಡಲು ತೆರಳುತ್ತಿದ್ದರೆ, ಝಾಕ್ ಫೋಲ್ಕ್ಸ್ ಕೂಡ ಇಂಜುರಿಯಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಮುಂದಿನ ಪಂದ್ಯಗಳಿಗೆ ದೂರ ಉಳಿದಿದ್ದಾರೆ.
ಮ್ಯಾಟ್ ಹೆನ್ರಿ ಅವರ ಬದಲಿಗೆ ಅನುಭವಿ ವೇಗಿ ಬ್ಲೇರ್ ಟಿಕ್ನರ್ ಮೂರನೇ ಪಂದ್ಯಕ್ಕೂ ಮುನ್ನವೇ ತಂಡವನ್ನು ಸೇರಿಕೊಳ್ಳಲಿದ್ದಾರೆ. ಲಾಕಿ ಫರ್ಗುಸನ್ ಅನುಪಸ್ಥಿತಿಯಲ್ಲಿ ಮ್ಯಾಟ್ ಫಿಶರ್ ಅವರನ್ನು 3ನೇ ಟಿ20 ಪಂದ್ಯಕ್ಕಾಗಿ ಬ್ಯಾಕ್-ಅಪ್ ಆಟಗಾರನಾಗಿ ಕರೆತರಲಾಗಿದೆ. ಇನ್ನು ಅನುಭವಿ ವೇಗಿ ಜೋಶ್ ಕ್ಲಾರ್ಕ್ಸನ್ ಅವರು ಆಕ್ಲೆಂಡ್‌ನಲ್ಲಿ ನಡೆಯಲಿರುವ 4 ಮತ್ತು 5ನೇ ಟಿ20 ಪಂದ್ಯಗಳಿಗೆ ಮಾತ್ರ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಸತತ ಎರಡು ಪಂದ್ಯಗಳನ್ನು ಸೋತು ಸಂಕಷ್ಟದಲ್ಲಿರುವ ನ್ಯೂಜಿಲೆಂಡ್ ತಂಡಕ್ಕೆ ಈ ಆಟಗಾರರ ಬದಲಾವಣೆ ಯಾವ ರೀತಿ ನೆರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹೊಸ ಉತ್ಸಾಹದೊಂದಿಗೆ ಕಣಕ್ಕಿಳಿಯಲಿರುವ ಕಿವೀಸ್ ಪಡೆ ಭಾರತದ ವಿರುದ್ಧ ಕಮ್‌ಬ್ಯಾಕ್ ಮಾಡಲಿದೆಯೇ ಎಂಬುದು ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.



