ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾ ಮತ್ತು ಯೆಮನ್‌ನ ಹೌತಿ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ನಗರಗಳಾದ ಮೆಕ್ಕಾ ಮತ್ತು ಮದೀನಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂಬ ವರದಿಗಳನ್ನು ಇರಾನ್ ಬೆಂಬಲಿತ ಹೌತಿ ಸಂಘಟನೆ ಶನಿವಾರ ತೀವ್ರವಾಗಿ ನಿರಾಕರಿಸಿದೆ. ಆದರೆ, ಸೌದಿ ಪಡೆಗಳು ಹೌತಿಗಳು ಉಡಾಯಿಸಿದ್ದ ಕ್ಷಿಪಣಿಗಳನ್ನು ಆಕಾಶದಲ್ಲೇ ಹೊಡೆದುರುಳಿಸಿದ್ದು, ಅದರ ಅವಶೇಷಗಳು ಪವಿತ್ರ ನಗರಗಳ ಸುತ್ತಮುತ್ತ ಪತನಗೊಂಡಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ.
ಸೌದಿ ರಕ್ಷಣಾ ಪಡೆಯ ಕಾರ್ಯಾಚರಣೆ
ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಇಲಾಖೆಯ ಮಾಹಿತಿ ಪ್ರಕಾರ, ಯೆಮನ್‌ನಿಂದ ಹಾರಿಬಂದಿದ್ದ ಎರಡು ಪ್ರಬಲ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೌದಿ ವಾಯುಪಡೆ ಯಶಸ್ವಿಯಾಗಿ ತಡೆದು ಧ್ವಂಸಗೊಳಿಸಿದೆ. ಈ ಕ್ಷಿಪಣಿಗಳ ಚೂರುಗಳು ಹಾಗೂ ಅವಶೇಷಗಳು ಮೆಕ್ಕಾ, ಜಿದ್ದಾ, ತಾಇಫ್ ಮತ್ತು ರಾಬಿಘ್ ಪ್ರದೇಶಗಳ ಬಳಿ ಬಿದ್ದಿವೆ. ದಾಳಿಯ ಮುನ್ಸೂಚನೆ ಸಿಗುತ್ತಿದ್ದಂತೆ ತಾಇಫ್, ಯಾನ್ಬು, ಮೆಕ್ಕಾ ಮತ್ತು ಜಿದ್ದಾ ನಿವಾಸಿಗಳಿಗೆ ತಕ್ಷಣವೇ ಜಾಗೃತರಾಗಿರುವಂತೆ ಸೌದಿ ಸರ್ಕಾರ ಎಚ್ಚರಿಕೆ ನೀಡಿತ್ತು. ಸುಮಾರು 10 ನಿಮಿಷಗಳ ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದಾಗಿ ಪ್ರಕಟಿಸಿತು.
ಹೌತಿಗಳ ವಾದವೇನು?
ಮೆಕ್ಕಾ ಮತ್ತು ಮದೀನಾದಂತಹ ಧಾರ್ಮಿಕ ಕೇಂದ್ರಗಳನ್ನು ತಾವು ಎಂದಿಗೂ ಗುರಿಯಾಗಿಸುವುದಿಲ್ಲ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರೀ ಸ್ಪಷ್ಟಪಡಿಸಿದ್ದಾರೆ. “ನಮ್ಮ ಗುರಿ ಇರುವುದು ಕೇವಲ ಸೌದಿಯ ತೈಲ ಘಟಕಗಳು ಮತ್ತು ಮಿಲಿಟರಿ ನೆಲೆಗಳ ಮೇಲೆ ಮಾತ್ರ. ನಾವು ಯಾವುದೇ ದಾಳಿ ನಡೆಸಿದರೂ ಅದನ್ನು ಬಹಿರಂಗವಾಗಿಯೇ ಒಪ್ಪಿಕೊಳ್ಳುತ್ತೇವೆ,” ಎಂದು ಅವರು ಹೇಳಿದ್ದಾರೆ.
ಶನಿವಾರ ತಾವು ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಯಾನ್ಬು ಮತ್ತು ರಾಬಿಘ್‌ನಲ್ಲಿರುವ ಅರಾಮ್ಕೋ ತೈಲ ಸಂಸ್ಕರಣಾಗಾರಗಳು ಹಾಗೂ ತೈಲ ಪೈಪ್‌ಲೈನ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ.
ಏಡನ್ ಬಂದರಿನಲ್ಲೂ ರಕ್ತಪಾತ
ಇತ್ತ ಯೆಮನ್‌ನ ದಕ್ಷಿಣ ಭಾಗದ ಬಂದರು ನಗರಿ ಏಡನ್‌ನಲ್ಲಿಯೂ ಭೀಕರ ಯುದ್ಧ ನಡೆದಿದೆ. ಯೆಮನ್‌ನ ಅಧಿಕೃತ ಸರ್ಕಾರಿ ಕೋಸ್ಟ್ ಗಾರ್ಡ್ ಕೇಂದ್ರಗಳ ಮೇಲೆ ಹೌತಿಗಳು ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದ್ದಾರೆ ಎಂದು ಯೆಮನ್ ಆಂತರಿಕ ಸಚಿವಾಲಯ ಆರೋಪಿಸಿದೆ. ಆದರೆ ಹೌತಿಗಳು ತಾವು ಸೌದಿ ಬೆಂಬಲಿತ ಮಿಲಿಟರಿ ಕ್ಯಾಂಪ್‌ಗಳ ಮೇಲೆ ಮಾತ್ರ ದಾಳಿ ಮಾಡಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ:
ಬೂದಿ ಮುಚ್ಚಿದ ಕೆಂಡವಾದ 2022ರ ಶಾಂತಿ ಒಪ್ಪಂದ
2022 ರಲ್ಲಿ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಸೌದಿ ನೇತೃತ್ವದ ಒಕ್ಕೂಟ ಮತ್ತು ಹೌತಿಗಳ ನಡುವೆ ಏರ್ಪಟ್ಟಿದ್ದ ಕದನ ವಿರಾಮ ಒಪ್ಪಂದವು ಈ ಹೊಸ ದಾಳಿಗಳಿಂದಾಗಿ ಸಂಪೂರ್ಣವಾಗಿ ಮುರಿದುಬಿದ್ದಿದೆ. ಪ್ರಸ್ತುತ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ವ್ಯಾಪಕ ಪ್ರಾದೇಶಿಕ ಸಂಘರ್ಷದ ಮತ್ತೊಂದು ಮುಖವಾಗಿ ಈ ಯೆಮನ್-ಸೌದಿ ಯುದ್ಧ ಗೋಚರಿಸುತ್ತಿದೆ.
ಪ್ರಯಾಣಿಕರಿಗೆ ಹೌತಿಗಳ ಎಚ್ಚರಿಕೆ
ಸೌದಿಯ ಪ್ರಮುಖ ವಿಮಾನ ನಿಲ್ದಾಣಗಳು ಇನ್ನೂ ತಮಗೆ ಮಿಲಿಟರಿ ಟಾರ್ಗೆಟ್‌ಗಳಾಗಿಯೇ ಇವೆ ಎಂದು ಹೌತಿಗಳು ಹೇಳಿರುವುದರಿಂದ, ರಿಯಾದ್ ವಿಮಾನ ನಿಲ್ದಾಣವನ್ನು ಬಳಸದಂತೆ ವಿಮಾನಯಾನ ಸಂಸ್ಥೆಗಳು ಮತ್ತು ಪ್ರಯಾಣಿಕರಿಗೆ ಬಂಡುಕೋರರು ಮತ್ತೊಮ್ಮೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಮೆಕ್ಕಾ ಮತ್ತು ಮದೀನಾ ವಾಯುಪ್ರದೇಶಕ್ಕೆ ಮಾತ್ರ ಈ ಎಚ್ಚರಿಕೆಯಿಂದ ವಿನಾಯಿತಿ ನೀಡಲಾಗಿದೆ. ಈ ತಿಂಗಳ ಆರಂಭದಲ್ಲಿ ರಿಯಾದ್ ಮತ್ತು ದಮ್ಮಾಮ್ ವಿಮಾನ ನಿಲ್ದಾಣಗಳ ಮೇಲೆ ನಡೆದಿದ್ದ ಹೌತಿ ದಾಳಿಯಲ್ಲಿ ಭಾರತೀಯ ಪ್ರಜೆಯೊಬ್ಬರು ಸೇರಿ ಹಲವರು ಸಾವನ್ನಪ್ಪಿದ್ದರು.



