October 25, 2026
Sunday, October 25, 2026
spot_img

ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಮುಂದೂಡಿಕೆ ವದಂತಿಗೆ ಬ್ರೇಕ್: ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್ಕ್:‌

ರಾಜ್ಯದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಂದೂಡಿಕೆಯಾಗಲಿವೆ ಎಂಬ ಗೊಂದಲಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತೆರೆ ಎಳೆದಿದ್ದಾರೆ. ಜನಗಣತಿ ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಪರೀಕ್ಷೆಗಳು ತಡವಾಗಬಹುದು ಎಂಬ ವದಂತಿಗಳು ಹರಡಿದ್ದವು. ಆದರೆ, ಪರೀಕ್ಷೆಗಳು ನಿಗದಿತ ವೇಳಾಪಟ್ಟಿಯಂತೆಯೇ ನಡೆಯಲಿದ್ದು, ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಮುಂದೂಡಿದರೆ ವಿದ್ಯಾರ್ಥಿಗಳಿಗೆ ಸಂಕಷ್ಟ

ಪರೀಕ್ಷೆಗಳನ್ನು ಮುಂದೂಡಿದರೆ ಮುಂದಿನ ಶೈಕ್ಷಣಿಕ ಸಾಲಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಇದರಿಂದ ಸಿಇಟಿ (CET) ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಮತ್ತು ಕೌನ್ಸೆಲಿಂಗ್ ಪ್ರಕ್ರಿಯೆಗಳು ವಿಳಂಬವಾಗುತ್ತವೆ. ಅಲ್ಲದೆ, ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ 5 ತಿಂಗಳ ಕಾಲ ಬಳಸಿಕೊಂಡರೆ ಮಕ್ಕಳ ಕಲಿಕೆಗೆ ತೀವ್ರ ಅಡಚಣೆಯಾಗುತ್ತದೆ. ಹೀಗಾಗಿ ಪರೀಕ್ಷೆ ಮುಂದೂಡುವ ಬದಲು, ಜನಗಣತಿ ಪ್ರಕ್ರಿಯೆಯನ್ನೇ ಮುಂದೂಡುವಂತೆ ಸಚಿವರು ಒತ್ತಾಯಿಸಿದ್ದಾರೆ.

ತಾತ್ಕಾಲಿಕ ವೇಳಾಪಟ್ಟಿ ವಿವರ ಹೀಗಿದೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯೂ ಮುಕ್ತಾಯಗೊಂಡಿದೆ. ಮಂಡಳಿಯು ಶೀಘ್ರದಲ್ಲೇ ಅಂತಿಮ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ.

ಇದನ್ನೂ ಓದಿ:

ಸದ್ಯದ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, 2027ರ ಜನವರಿ ತಿಂಗಳಿನಿಂದಲೇ ಪ್ರಾಯೋಗಿಕ ಪರೀಕ್ಷೆಗಳು ಆರಂಭವಾಗಲಿವೆ. ತದನಂತರ, ದ್ವಿತೀಯ ಪಿಯುಸಿ ಮೊದಲನೇ ಪರೀಕ್ಷೆಯು 2027ರ ಫೆಬ್ರವರಿ 27 ರಿಂದ ಮಾರ್ಚ್ 17 ರವರೆಗೆ ಜರುಗಲಿದ್ದು, ಎರಡನೇ ಪರೀಕ್ಷೆಯು 2027ರ ಮೇ 3 ರಿಂದ ಮೇ 15 ರವರೆಗೆ ನಡೆಯಲಿದೆ. ಈ ಎಲ್ಲಾ ಪರೀಕ್ಷೆಗಳು ನಿಗದಿತ ದಿನಗಳಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದ್ದು, ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಓದಲು ಹೆಚ್ಚುವರಿಯಾಗಿ 15 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

Must Read