ಎಸ್. ರುದ್ರೇಶ್ವರ
ಹೊಸದಿಗಂತ ವರದಿ ರಾಮನಗರ:
ಬೆಂಗಳೂರು ದಕ್ಷಿಣ ಜಿಲ್ಲೆಯ ಪವಿತ್ರ ಧಾರ್ಮಿಕ ತಾಣ ಹಾಗೂ ರಣಹದ್ದುಗಳ ರಕ್ಷಿತಾರಣ್ಯ ಎನಿಸಿರುವ ಶ್ರೀರಾಮದೇವರ ಬೆಟ್ಟ ಅರಣ್ಯ ಪ್ರದೇಶದ ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ. ಬೆಟ್ಟದ ಮೇಲೆ ಇಂತಹ ಚಟುವಟಿಕೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂರಕ್ಷಿತ ಅರಣ್ಯ ಪ್ರದೇಶವಾಗಿರುವ ರಾಮದೇವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಮಾನವ ಚಟುವಟಿಕೆಗಳಿಗೆ ಸಾಕಷ್ಟು ನಿರ್ಬಂಧವಿದೆ. ಆದರೂ,ಕೆಲ ಮಂದಿ ಗುಂಪು ಗುಂಪಾಗಿ ಬಂದು ಮದ್ಯದ ಪಾರ್ಟಿ ನಡೆಸಲು ಅವಕಾಶ ಮಾಡಿಕೊಟ್ಟವರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕೆಲ ದಿನಗಳ ಹಿಂದೆ ರಾಮದೇವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಟೆಂಪೋ ಟ್ರಾವೆಲರ್ ವಾಹನದಲ್ಲಿ ಬಂದಿದ್ದ ಹತ್ತಾರು ಮಂದಿಯ ತಂಡ ಅರಣ್ಯ ಪ್ರದೇಶದಲ್ಲಿ ಮದ್ಯ ಮಾಂಸದೊಂದಿಗೆ ಬಂದು ಪಾರ್ಟಿಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಮದೇವರ ಬೆಟ್ಟದಲ್ಲಿರುವ ಶ್ರೀರಾಮದೇವರ ದೇವಾಲಯಕ್ಕೆ ಬರುವ ಭಕ್ತರಿಗೆ ಮತ್ತು ರಾಮದೇವರ ಬೆಟ್ಟದ ರಣದ್ದುಗಳ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮಾತ್ರ ಅವಕಾಶವಿದ್ದು, ಬೆಟ್ಟಕ್ಕೆ ಬರುವ ಪ್ರವಾಸಿಗರು ಏನು ಮಾಡಬೇಕು, ಏನು ಮಾಡಬಾರದು ಎಂಬ ದೊಡ್ಡ ಫಲಕವನ್ನೇ ಅರಣ್ಯ ಇಲಾಖೆ ಹಾಕಿದೆ. ಇಷ್ಟೆಲ್ಲಾ ನಿರ್ಬಂಧಗಳ ನಡುವೆಯೂ ಮದ್ಯ ಸೇವನೆಗೆ ಅವಕಾಶ ನೀಡಿರುವುದು ಯಾರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
2012ರಲ್ಲಿ ಶ್ರೀರಾಮದೇವರ ಬೆಟ್ಟ ಅರಣ್ಯ ಪ್ರದೇಶವನ್ನು ರಣಹದ್ದುಗಳ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಈ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇದಿಸಲಾಗಿದೆ. ಈ ಅರಣ್ಯ ಪ್ರದೇಶಕ್ಕೆ ಬರುವ ವಾಹನಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಿ ಬಿಡಲಾಗುತ್ತದೆ. ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಯಾವುದೇ ರೀತಿಯ ಅವಕಾಶವಿರುವುದಿಲ್ಲ. ಆದರೂ ಬೆಟ್ಟದ ಮೇಲಿನ ಅರಣ್ಯ ಪ್ರದೇಶಕ್ಕೆ ಹೋಗಿ ಎಣ್ಣೆಪಾರ್ಟಿ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ರಾಮದೇವರ ಅರಣ್ಯ ಪ್ರದೇಶಕ್ಕೆ ಬರುವ ವಾಹನಗಳನ್ನು ಕೆಳಭಾಗದಲ್ಲೇ ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿದೆ. ಬೆಟ್ಟದ ಮೇಲೆ ಪಾರ್ಟಿಮಾಡಿರುವ ಕೆಲ ಮಂದಿ ವಿಡಿಯೋದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಣ ನೀಡಿ ಮದ್ಯವನ್ನು ಮೇಲಕ್ಕೆ ತಂದಿದ್ದೇವೆ ಎಂದು ಹೇಳುತ್ತಿದ್ದಾರೆ. ರಾಜಾರೋಷವಾಗಿ ಮದ್ಯವನ್ನು ಬೆಟ್ಟದ ಮೇಲೆ ತೆಗೆದುಕೊಂಡು ಹೋಗಲು ಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿಗಳ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ.



