October 25, 2026
Sunday, October 25, 2026
spot_img

ಅರ್ಧವಾರ್ಷಿಕ ಪರೀಕ್ಷೆ ಮುಗಿದರೂ ಮಕ್ಕಳಿಗಿಲ್ಲ ಶೂ, ಸಾಕ್ಸ್: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ವರ್ಷದ ಅರ್ಧವಾರ್ಷಿಕ ಪರೀಕ್ಷೆಗಳು ಮುಗಿದಿದ್ದರೂ ಇನ್ನು ಅನೇಕ ಕಡೆಗಳಲ್ಲಿ ಶೂ, ಸಾಕ್ಸ್ ವಿತರಿಸದ ಸರ್ಕಾರದ ನಡೆಯನ್ನು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಖಂಡಿಸಿದ್ದಾರೆ. ಬಡವರ ಹೆಸರಿನಲ್ಲಿ ರಾಜಕಾರಣ ಮಾಡುವ ಕಾಂಗ್ರೆಸ್ ಸರ್ಕಾರಕ್ಕೆ ಶಾಲಾ ಮಕ್ಕಳ ಕನಿಷ್ಠ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ

ಬೆಂಗಳೂರಿನ ಸರ್ಕಾರಿ ಶಾಲೆಗಳ ಸುಮಾರು 22,210ಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಇನ್ನೂ ಶೂ ಮತ್ತು ಸಾಕ್ಸ್‌ಗಳನ್ನು ಒದಗಿಸಿಲ್ಲ ಎಂದು ಅಶೋಕ್ ಅಂಕಿ-ಅಂಶಗಳೊಂದಿಗೆ ದೂರಿದ್ದಾರೆ. ಕಳೆದ ಎರಡು ವರ್ಷಗಳಿಂದ ಅನೇಕ ಕಡೆಗಳಲ್ಲಿ ಚಳಿಗಾಲದ ಸ್ವೆಟರ್‌ಗಳನ್ನೂ ವಿತರಿಸಿಲ್ಲ. ಸ್ವೆಟರ್‌ಗಾಗಿ ಪೋಷಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡುವುದಾಗಿ ನೀಡಿದ್ದ ಭರವಸೆಯೂ ಈಡೇರಿಲ್ಲ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ:

ರಾಜಕೀಯ ಪ್ರಚಾರಕ್ಕೆ ತೋರುವ ಆಸಕ್ತಿಯನ್ನು ಸರ್ಕಾರ ಮಕ್ಕಳ ಶಿಕ್ಷಣದ ಕಡೆಗೆ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಹರಿದ ಶೂಗಳನ್ನು ಧರಿಸಿಯೇ ಶಾಲೆಗೆ ಬರುತ್ತಿರುವ ಮಕ್ಕಳ ಸ್ಥಿತಿಗೆ ಸರ್ಕಾರವೇ ಹೊಣೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಮಧ್ಯಪ್ರವೇಶಿಸಿ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಮತ್ತು ಈ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು ಎಂದು ಆರ್. ಅಶೋಕ್ ಆಗ್ರಹಿಸಿದ್ದಾರೆ.

Must Read