ಹೊಸದಿಗಂತ ವರದಿ ಅಂಕೋಲಾ:
ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ತಾಲೂಕಿನ ಬಾಳೆಗುಳಿಯಿಂದ ಮಾಸ್ತಿಕಟ್ಟಾದ ವರೆಗೆ ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆಯ ಶೀಘ್ರ ದುರುಸ್ಥಿಗೆ ಒತ್ತಾಯಿಸಿ ಜನಶಕ್ತಿ ವೇದಿಕೆ, ಉತ್ತರ ಕನ್ನಡ ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಬಾಳೆಗುಳಿ ಬಳಿ ಪ್ರತಿಭಟನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿ ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಸಂಬಂಧಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸದಿರುವ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಅಣುಕು ಪ್ರಹಸನಗಳ ಮೂಲಕ ಪರಿಸ್ಥಿತಿಯ ಗಂಭೀರತೆಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾದವ ನಾಯಕ ಮಾತನಾಡಿ ಅಂಕೋಲಾ ತಾಲೂಕಿನ ಬಾಳೆಗುಳಿಯಿಂದ ಮಾಸ್ತಿಕಟ್ಟಾ ವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಪದೇಪದೇ ಕೆಟ್ಟು ಹೋಗಿ ರಸ್ತೆಯಲ್ಲಿ ಅಪಘಾತಗಳು ಸಾವು, ನೋವುಗಳು ಹೆಚ್ಚತೊಡಗಿದೆ,ವಾಹನಗಳ ಬಿಡಿ ಭಾಗಗಳಿಗೆ ಹಾನಿಯುಂಟಾಗಿ ವಾಹನಗಳ ಮಾಲಿಕರು ದುಡಿಯುವ ವಾಹನಗಳನ್ನು ಮನೆಯಲ್ಲಿ ನಿಲ್ಲಿಸುವಂತಾಗಿದೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆ,ನಿರ್ಲಕ್ಷ್ಯದ ಧೋರಣೆಯಿಂದಾಗಿ ಜನಸಾಮಾನ್ಯರು ಪ್ರತಿದಿನ ತೊಂದರೆ ಅನುಭವಿಸುವಂತಾಗಿದ್ದು ಜನಪ್ರತಿನಿಧಿಗಳೂ ತಲೆ ತಗ್ಗಿಸುವಂತಾಗಿದೆ ಎಂದರು.
ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿದ ನಂತರ ಈಗ ಕಾಮಗಾರಿಗೆ ಅನುಮೋದನೆ ಆಗಿದೆ ಎಂದು ಹೇಳಲಾಗುತ್ತಿದೆ,ಆದರೆ ಇದುವರೆಗೆ ಯಾವುದೇ ಒಡಂಬಡಿಕೆ ಆಗಿಲ್ಲ ಇನ್ನು ಎಷ್ಟು ದಿನಗಳು ಹೋಗುವದೋ ಗೊತ್ತಿಲ್ಲ, ಅಗಸ್ಟ್ ತಿಂಗಳಲ್ಲಿ ಅನುಮೋದನೆಗೆ ಹೋಗಿದ್ದು ಎರಡು ತಿಂಗಳುಗಳ ಕಾಲ ಒಂದು ಸಹಿ ಆಗದೇ ಅಧಿಕಾರಿಗಳ ಟೇಬಲ್ ಮೇಲೆ ಬಿದ್ದುಕೊಂಡ ಕಡತ ಪ್ರತಿಭಟನೆ ಮಾಡುತ್ತೇವೆ ಎಂದ ಮೇಲೆ ತಕ್ಷಣ ಸಹಿ ಹಾಕಿ ಮುಂದಕ್ಕೆ ಹೋಗಿದೆ ಈಗ ಕೇಂದ್ರ ಸರ್ಕಾರದ ಅಧಿಕಾರಿಗಳು ವಿಳಂಬ ಆಗಲು ಕಾರಣವೇನು ಎಂದು ಸ್ಪಷ್ಟೀಕರಣ ಕೇಳುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸ್ಪಂದನ ಫೌಂಡೇಶನ್ನಿನ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ ದಿನನಿತ್ಯ ಹದಗೆಟ್ಟ ರಸ್ತೆಯಲ್ಲಿ ಓಡಾಡುವ ಜನರಿಗೆ ತಾವು ಮನೆಗೆ ತಲುಪುತ್ತೇವೋ ಎನ್ನುವಂತ ಭರವಸೆ ಇಲ್ಲದಂತಾಗಿದೆ ಇದು ಯಾವ ಸರ್ಕಾರಗಳ ವಿರುದ್ಧದ ಪ್ರತಿಭಟನೆಯಲ್ಲ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರ ಆಕ್ರೋಶವಾಗಿದೆ ಎಂದರು.
ರಸ್ತೆ ಕಾಮಗಾರಿಗೆ ಸಂಬಂಧಿಸಿದ ಕಡತ ಎರಡು ತಿಂಗಳುಗಳ ಕಾಲ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿಯ ಬಳಿ ಸಹಿ ಆಗದೇ ಬಿದ್ದಿರುವ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ ಅವರು ರಾಷ್ಟ್ರೀಯ ಹೆದ್ದಾರಿಯ ಇಲಾಖೆಯ ಅಧಿಕಾರಿಗೆ ತರಾಟೆಗೆ ತೆಗೆದುಕೊಂಡು ಅದನ್ನು ಜನಪ್ರತಿನಿಧಿಗಳ ಗಮನಕ್ಕೆ ಯಾಕೆ ತಂದಿಲ್ಲ ಇಷ್ಟೊಂದು ಬೇಜವಾಬ್ದಾರಿ ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಜಿ.ಎಂ.ಶೆಟ್ಟಿ ಮಾತನಾಡಿ, ಕಳೆದ ವರ್ಷ ಪ್ರತಿಭಟನೆ ನಡೆಸಿದ ನಂತರ ತೇಪೆ ಹಚ್ಚುವ ಕೆಲಸ ಮಾಡಲಾಯಿತು ಒಂದು ವರ್ಷ ಕಳೆಯುವ ಮೊದಲೇ ರಸ್ತೆ ಇನ್ನಷ್ಟು ದುಸ್ಥಿತಿಗೆ ತಲುಪಿದೆ ಗುಣಮಟ್ಟದ ಕೆಲಸವೇ ನಡೆಯುತ್ತಿಲ್ಲ ಎಂದರು. ಬಿಜೆಪಿಯ ಹಿರಿಯ ಮುಖಂಡ ಭಾಸ್ಕರ ನಾರ್ವೇಕರ, ವಕೀಲ ಉಮೇಶ ನಾಯ್ಕ,ನಾಗಾನಂದ ಬಂಟ ಮೊದಲಾದವರು ಮಾತನಾಡಿದರು.
ಲಾರಿ ಮಾಲೀಕರ ಸಂಘದ ತುಳಸಿದಾಸ ಕಾಮತ್,ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ ಸೇರಿದಂತೆ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಹಿರಿಯ ಸಾಮಾಜಿಕ ಕಾರ್ಯಕರ್ತ ಸುರೇಶ ವೆರ್ಣೇಕರ್,ವಿಜಯಕುಮಾರ ನಾಯ್ಕ, ಶಿವಾನಂದ ನಾಯ್ಕ ಅಲಗೇರಿ,ಶಂಕರ ಗೌಡ ತಂಡದವರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸತ್ತವರಿಗೆ ಪಿಂಡ ಪ್ರದಾನ ಕಾರ್ಯಕ್ರಮ ಅಣುಕು ಪ್ರಹಸನವನ್ನು ಪ್ರದರ್ಶಿಸಿದರು.
ಡಿ.ವೈ.ಎಸ್.ಪಿ ಲೋಕಾಪುರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಧಿಕಾರಿಗಳಿಗೆ ಮನವಿ ನೀಡಿದ ಪ್ರತಿಭಟನಾಕಾರರು ರಸ್ತೆ ಕಾಮಗಾರಿ ಶೀಘ್ರ ಆರಂಭ ಆಗದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಕೆ ನೀಡಿದರು.



