ಹೊಸದಿಗಂತ ವರದಿ ಯಲ್ಲಾಪುರ:
ಕೆಲಸದ ವೇಳೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ ಕಾರ್ಮಿಕ ಮೃತಪಟ್ಟಿದ್ದು, ಇದಕ್ಕೆ ಗುತ್ತಿಗೆದಾರ, ಮೇಲ್ವಿಚಾರಕ ಮತ್ತು ಮ್ಯಾನೇಜರ್ ಅವರೇ ನೇರ ಕಾರಣ ಎಂದು ಆರೋಪಿಸಿ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕಾರ್ಮಿಕನನ್ನು ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ರತ್ನಪ್ಪ ಲಮಾಣಿ (36) ಎಂದು ಗುರುತಿಸಲಾಗಿದೆ.
ಅ.24 ರಂದು ಮಧ್ಯಾಹ್ನ 12.30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ನಾಜಗೇರಿ-ಕೊಡಸೆ ಹೈಪವರ್ ವಿದ್ಯುತ್ ಲೈನ್ ಅಡಿಯಲ್ಲಿ ಬೆಳೆದಿದ್ದ ಗಿಡ-ಮರಗಳ ರೆಂಬೆ-ಕೊಂಬೆಗಳನ್ನು ತೆರವುಗೊಳಿಸುವ ಕಾಮಗಾರಿಗೆ ರತ್ನಪ್ಪ ಸೇರಿ 12 ಕಾರ್ಮಿಕರನ್ನು ಕರೆತರಲಾಗಿತ್ತು. ಲೈನ್ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರತ್ನಪ್ಪ ಅವರ ಕೈಯಲ್ಲಿದ್ದ ಬಿದಿರಿನ ಕೋಲಿಗೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದೆ. ಬಿದಿರಿನ ಮೂಲಕ ವಿದ್ಯುತ್ ಹರಿದು ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಕೆಲಸದ ಸಂದರ್ಭದಲ್ಲಿ ಕಾರ್ಮಿಕರ ಸುರಕ್ಷತೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರಲಾಗಿದೆ. ಗುತ್ತಿಗೆದಾರ ಅಚ್ಯುತನ್ ಶ್ರೀನಿವಾಸ (53) ಹಾಗೂ ಧಾರವಾಡದ ಪವರ್ ಗ್ರಿಡ್ ನ ಮೇಲ್ವಿಚಾರಕ ಮತ್ತು ಮ್ಯಾನೇಜರ್ ಅವರ ನಿರ್ಲಕ್ಷ್ಯದಿಂದಲೇ ತನ್ನ ಪತಿ ಮೃತಪಟ್ಟಿದ್ದಾರೆ ಎಂದು ಮೃತ ರತ್ನಪ್ಪ ಅವರ ಪತ್ನಿ ಗಿರಿಜಾ ರತ್ನಪ್ಪ ಲಮಾಣಿ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.



