October 25, 2026
Sunday, October 25, 2026
spot_img

ಮಾದಕ ದ್ರವ್ಯ ಜಾಲಕ್ಕೆ ‘ಆಪರೇಷನ್ ಟ್ರೈಡೆಂಟ್’ ಶಾಕ್: 38 ಕಡೆ ಏಕಕಾಲದಲ್ಲಿ ದಾಳಿ, 100 ಕೋಟಿ ರೂ. ಹವಾಲಾ ಜಾಲ ಬಯಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆ ಜಾಲದ ವಿರುದ್ಧ ಕೇಂದ್ರದ ಮಾದಕ ದ್ರವ್ಯ ನಿಯಂತ್ರಣ ದಳ (NCB) ಭಾರೀ ಕಾರ್ಯಾಚರಣೆ ನಡೆಸಿದೆ. ‘ಆಪರೇಷನ್ ಟ್ರೈಡೆಂಟ್’ ಹೆಸರಿನಲ್ಲಿ ಅಸ್ಸಾಂ, ಮಿಜೋರಾಂ ಮತ್ತು ಮಣಿಪುರದ 38 ಸ್ಥಳಗಳಲ್ಲಿ ಅಕ್ಟೋಬರ್ 23ರಂದು ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು ಕಾರ್ಯಾಚರಣೆಯಲ್ಲಿ 100 ಕೋಟಿ ಮೌಲ್ಯದ ಹವಾಲಾ ವಹಿವಾಟು ಪತ್ತೆಯಾಗಿದ್ದು, 1,424 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

18 ಮಂದಿ ಬಂಧನ, ಕೋಟ್ಯಂತರ ರೂಪಾಯಿ ಆಸ್ತಿ ಜಪ್ತಿ

ಎನ್‌ಸಿಬಿ ನೇತೃತ್ವದಲ್ಲಿ ವಿವಿಧ ಕೇಂದ್ರ ಸಂಸ್ಥೆಗಳು ಹಾಗೂ ಮೂರು ರಾಜ್ಯಗಳ ಪೊಲೀಸ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ವೇಳೆ 17.82 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, 500 ಡೆಟೊನೇಟರ್‌ಗಳು ಮತ್ತು 12 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಒಟ್ಟು 18 ಮಂದಿಯನ್ನು ಬಂಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ:

ಗಡಿ ದಾಟಿ ಹರಡಿದ್ದ ಕಳ್ಳಸಾಗಣೆ ಜಾಲ

ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಗಡಿಭಾಗಗಳನ್ನು ಸಂಪರ್ಕಿಸುವ ‘ಡೆತ್ ಟ್ರಯಾಂಗಲ್ ಕಾರಿಡಾರ್’ ಮೂಲಕ ಮೆಥಾಂಫೆಟಮೈನ್ ಮತ್ತು ಹೆರಾಯಿನ್ ಸಾಗಣೆ ನಡೆಯುತ್ತಿತ್ತು ಎಂದು ತನಿಖಾ ಸಂಸ್ಥೆಗಳು ತಿಳಿಸಿವೆ. ಮಿಜೋರಾಂನ ಐಜ್ವಾಲ್, ಚಂಫೈ, ಜೊಖಾವ್ತಾರ್, ಮಣಿಪುರದ ಚುರಾಚಂದ್‌ಪುರ ಮತ್ತು ಅಸ್ಸಾಂನ ಕ್ಯಾಚಾರ್ ಪ್ರದೇಶಗಳಲ್ಲೂ ದಾಳಿ ನಡೆಸಲಾಗಿದೆ.

ಮ್ಯಾನ್ಮಾರ್ ಮೂಲದ ತಂಗ್ಚಿನ್ಟುವಾಂಗ್ ಅಲಿಯಾಸ್ ಚಿನ್ಟುವಾಂಗ್ ನೇತೃತ್ವದ ಜಾಲದ ಬಗ್ಗೆ ತನಿಖೆ ನಡೆಸಲಾಗಿದ್ದು, ಸಾಗಣೆದಾರರು, ಹಣಕಾಸು ಮಧ್ಯವರ್ತಿಗಳು ಮತ್ತು ನಕಲಿ ಸಂಸ್ಥೆಗಳ ಸಂಪರ್ಕಗಳನ್ನೂ ಪರಿಶೀಲಿಸಲಾಗಿದೆ. ಹಿಂದಿನ ತನಿಖೆಗಳಲ್ಲಿ ಪ್ರಮುಖ ಸಹಚರರು ಹಾಗೂ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ವ್ಯಕ್ತಿಗಳನ್ನು ಬಂಧಿಸಲಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ.

ಮಾದಕ ದ್ರವ್ಯ ಮುಕ್ತ ಭಾರತದ ಗುರಿ

ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗದೆ, ಅವುಗಳ ಹಿಂದಿರುವ ಹಣಕಾಸು ವ್ಯವಸ್ಥೆ ಮತ್ತು ಸಂಘಟಿತ ಜಾಲವನ್ನು ಪತ್ತೆಹಚ್ಚುವುದು ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2029ರ ಡಿಸೆಂಬರ್ 31ರೊಳಗೆ ಮಾದಕ ದ್ರವ್ಯ ಜಾಲಗಳನ್ನು ನಿರ್ಮೂಲನೆ ಮಾಡುವ ಗುರಿಯನ್ನು ಸರ್ಕಾರ ಪುನರುಚ್ಚರಿಸಿದೆ.

Must Read