ಹೊಸದಿಗಂತ ಡಿಜಿಟಲ್ ಡೆಸ್ಕ್:
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಸುತ್ತ ಎದ್ದಿರುವ ಕಾನೂನು ವಿವಾದ ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ಮತ್ತಷ್ಟು ಚರ್ಚೆಗೆ ಬಂದಿದೆ. ಚುನಾವಣಾ ಆಯೋಗ ಸಲ್ಲಿಸಿರುವ ಅಫಿಡವಿಟ್‌ಗೆ ಪ್ರತಿಕ್ರಿಯೆ ನೀಡಲು ಅರ್ಜಿದಾರರಿಗೆ ನ್ಯಾಯಾಲಯ 10 ದಿನಗಳ ಕಾಲಾವಕಾಶ ನೀಡಿದೆ. ಇದೇ ವೇಳೆ, ಬಿಹಾರದಲ್ಲಿ SIR ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಮತದಾರರ ನೋಂದಣಿಗೆ ಬಳಸುವ ಫಾರ್ಮ್ 6ರಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪದ ಕುರಿತು ರಾಜ್ಯಸಭಾ ಸಂಸದೆ ದೋಲಾ ಸೇನ್ ಸಲ್ಲಿಸಿರುವ ಹೊಸ ಅರ್ಜಿಗೂ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ.
SIR ಪ್ರಕ್ರಿಯೆಗೆ ಆಯೋಗದ ಸಮರ್ಥನೆ
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. SIR ಪ್ರಕ್ರಿಯೆ ಕಾನೂನುಬದ್ಧ ಅಧಿಕಾರದ ಅಡಿಯಲ್ಲಿ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ, ಈ ಸಂಬಂಧ ಸಲ್ಲಿಸಿರುವ ಅಫಿಡವಿಟ್‌ಗೆ ಮೂವರು ಚುನಾವಣಾ ಆಯುಕ್ತರೂ ಸರ್ವಾನುಮತದ ಅನುಮೋದನೆ ನೀಡಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ:
ಫಾರ್ಮ್ 6 ಬದಲಾವಣೆ ಬಗ್ಗೆ ಆಕ್ಷೇಪ
ದೋಲಾ ಸೇನ್ ಪರ ವಾದಿಸಿದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಸುಪ್ರೀಂ ಕೋರ್ಟ್‌ನ ಅನುಮೋದನೆ ದೊರೆತಿದೆ ಎಂದು ಹೇಳುವ ಮೂಲಕ ಫಾರ್ಮ್ 6ರ ಬದಲಾವಣೆ ಕುರಿತು ಆಯೋಗ ತಪ್ಪು ಪ್ರತಿಪಾದನೆ ಮಾಡಿದೆ ಎಂದು ವಾದಿಸಿದರು. ಇದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸುವುದಾಗಿ ಮುಖ್ಯ ನ್ಯಾಯಮೂರ್ತಿ ತಿಳಿಸಿದರು. ಆದರೆ, ಫಾರ್ಮ್ 6ರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆಯೋಗ ತನ್ನ 248 ಪುಟಗಳ ಅಫಿಡವಿಟ್‌ನಲ್ಲಿ ಸ್ಪಷ್ಟಪಡಿಸಿದೆ.
ರಾಜಕೀಯ ವಲಯದಲ್ಲೂ ತೀವ್ರ ಚರ್ಚೆ
ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ಆಯುಕ್ತರ ನಡುವೆ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂಬ ವರದಿ ಪ್ರಕಟವಾದ ಬಳಿಕ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.



