ಹೊಸದಿಗಂತ ವರದಿ ಕಲಬುರಗಿ:
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯ ಮೊದಲ ಸುತ್ತಿನಲ್ಲಿ ಬಿಜೆಪಿ–ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ವಿರುದ್ಧ1500 ಮತಗಳ ಮುನ್ನಡೆ ಸಾಧಿಸಿದ್ದಾರೆ ಎನ್ನಲಾಗುತ್ತಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಸುತ್ತಿನಲ್ಲಿ ಸುಮಾರು 12,000 ಮತಗಳ ಎಣಿಕೆ ನಡೆಯುತ್ತಿದೆ. ಲಭ್ಯವಾಗಿರುವ ಆರಂಭಿಕ ಅನಧಿಕೃತ ಲೆಕ್ಕಾಚಾರದ ಪ್ರಕಾರ, ನಮೋಶಿ ಅವರಿಗೆ ಸುಮಾರು 6,500 ಮತಗಳು, ಶರಣಪ್ಪ ಮಟ್ಟೂರ ಅವರಿಗೆ 5,000 ಮತಗಳು ಬಂದಿದ್ದು, ಇತರ ಅಭ್ಯರ್ಥಿಗಳು ಒಟ್ಟಾಗಿ ಸುಮಾರು 500 ಮತಗಳನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ.
ಈ ಲೆಕ್ಕಾಚಾರದಂತೆ ನಮೋಶಿ ಅವರು ಮಟ್ಟೂರಗಿಂತ 1,5000 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಇದು ಅಧಿಕೃತ ಫಲಿತಾಂಶವಲ್ಲ. ಮತ ಎಣಿಕೆ ಮುಂದುವರಿದಿರುವುದರಿಂದ ಮುಂದಿನ ಸುತ್ತುಗಳಲ್ಲಿ ಮತಗಳ ಅಂತರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ 144 ಮತಪೆಟ್ಟಿಗೆಗಳ ಮತಪತ್ರಗಳ ಬಂಡ್ಲಿಂಗ್ ಕಾರ್ಯ ಪೂರ್ಣಗೊಂಡಿತ್ತು. ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ., ಚುನಾವಣಾಧಿಕಾರಿ ಜಹೀರಾ ನಸೀಮ್, ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್ಗಳ ಸಮ್ಮುಖದಲ್ಲಿ ಸ್ಟ್ರಾಂಗ್ರೂಂ ತೆರೆಯಲಾಯಿತು. ಬಳಿಕ ಮತಪತ್ರಗಳ ಬಂಡ್ಲಿಂಗ್ ಹಾಗೂ ರ್ಯಾಂಡಮೈಜೇಷನ್ ಪ್ರಕ್ರಿಯೆ ಪೂರ್ಣಗೊಳಿಸಿ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭಿಸಲಾಯಿತು.
ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖವಾಗಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಬಿಜೆಪಿ–ಎನ್ಡಿಎಯ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದ ಸಾಯಬಣ್ಣಾ ಜಮಾದಾರ ಹಾಗೂ ಜೆಡಿಯು(ಯು)ನ ಶಂಕರೆಡ್ಡಿ ಪಾಟೀಲ್ ಸ್ಪರ್ಧಿಸಿದ್ದಾರೆ.
ಮೊದಲ ಸುತ್ತಿನಲ್ಲೇ 1,500 ಮತಗಳ ಮುನ್ನಡೆ ಪಡೆದಿರುವ ನಮೋಶಿ, ಮುಂದಿನ ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಳ್ಳುವರೇ ಎಂಬುದು ಕುತೂಹಲ ಮೂಡಿಸಿದೆ.



