ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ರಕ್ಷಣಾ ಸಚಿವಾಲಯವನ್ನು ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ಗುರಿಯಾಗಿಸಿದ್ದೇವೆ ಎಂದು ಯೆಮನ್ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮಂಗಳವಾರ ಹೇಳಿಕೊಂಡಿದ್ದಾರೆ.
ಕ್ಷಿಪಣಿ ನೇರವಾಗಿ ಗುರಿಗೆ ಅಪ್ಪಳಿಸಿದೆ ಎಂದು ಹೌತಿ ಸೇನಾ ವಕ್ತಾರ ಹೇಳಿಕೆ ನೀಡಿದ್ದಾರೆ. ಆದರೆ ಈ ದಾಳಿಯ ಕುರಿತು ಸೌದಿ ಅಧಿಕಾರಿಗಳಿಂದ ದೃಢೀಕರಣ ಲಭ್ಯವಾಗಿಲ್ಲ.
ರಿಯಾದ್ನಲ್ಲಿ ಸ್ಫೋಟದ ಸದ್ದು
ಮಂಗಳವಾರ ಹೌತಿಗಳು ಉಡಾಯಿಸಿದ ಎರಡು ಕ್ಷಿಪಣಿಗಳನ್ನು ಸೌದಿ ಅರೇಬಿಯಾ ತಡೆದಿರುವುದಾಗಿ ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ರಾಜಧಾನಿ ರಿಯಾದ್ನಲ್ಲಿ ಸ್ಫೋಟದ ಸದ್ದು ಕೇಳಿಬಂದಿದೆ ಎಂದು ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಘಟನೆಯಿಂದ ನಗರದ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ.
ತೈಲ ಸಂಸ್ಕರಣಾಗಾರಕ್ಕೂ ಗುರಿ?
ಸೌದಿ ಅರೇಬಿಯಾದ ಪ್ರಮುಖ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾದ ರಾಸ್ ತನೂರಾ ಮೇಲೂ ದಾಳಿ ನಡೆಸಿರುವುದಾಗಿ ಹೌತಿಗಳು ಪ್ರತಿಪಾದಿಸಿದ್ದಾರೆ. ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ನಡೆಸಿದ್ದು, ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಹೌತಿ ಸೇನಾ ವಕ್ತಾರ ಹೇಳಿದ್ದಾರೆ. ಆದರೆ ಸೌದಿ ಅಧಿಕಾರಿಗಳು ಈ ದಾಳಿಯನ್ನು ಕೂಡ ಅಧಿಕೃತವಾಗಿ ದೃಢಪಡಿಸಿಲ್ಲ.
ಸಮುದ್ರ ಭದ್ರತಾ ಸಂಸ್ಥೆ ವ್ಯಾನ್ಗಾರ್ಡ್ ಪ್ರಕಾರ, ರಾಸ್ ತನೂರಾದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಆದರೆ ಹಾನಿಯ ಪ್ರಮಾಣ ಮತ್ತು ತೈಲ ಲೋಡಿಂಗ್ ಕಾರ್ಯಾಚರಣೆಗಳ ಮೇಲಿನ ಪರಿಣಾಮದ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಯುದ್ಧದ ನಡುವೆ ರಾಜತಾಂತ್ರಿಕ ಪ್ರಯತ್ನ
ಇತ್ತೀಚಿನ ತಿಂಗಳುಗಳಲ್ಲಿ ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಸಂಘರ್ಷ ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ, ಇರಾನ್ ಮಧ್ಯಸ್ಥಿಕೆಯಲ್ಲಿ ಹೌತಿಗಳಿಗೆ ಒಂದು ಬಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವ ಮೂಲಕ ಕದನ ವಿರಾಮ ಸಾಧಿಸಲು ಸೌದಿ ಪ್ರಸ್ತಾಪಿಸಿದೆ ಎಂದು ಇಸ್ರೇಲ್ನ ಪತ್ರಿಕೆಯೊಂದು ವರದಿ ಮಾಡಿದೆ.



