October 27, 2026
Tuesday, October 27, 2026
spot_img

ಜಗತ್ತಿನ ಸಮಸ್ಯೆಗಳಿಗೆ ಭಾರತದ ತಂತ್ರಜ್ಞಾನವೇ ಪರಿಹಾರವಾಗಲಿ: ಯುವ ಸಂಶೋಧಕರಿಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ತನ್ನದೇ ಛಾಪು ಮೂಡಿಸಬೇಕು. ಪ್ರಯೋಗಾಲಯಗಳಲ್ಲಿ ನಡೆಯುವ ಸಂಶೋಧನೆಗಳು ಜನಸಾಮಾನ್ಯರ ನಿತ್ಯಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ವಿಜ್ಞಾನಿಗಳು, ಸಂಶೋಧಕರಿಗೆ ಕರೆ ನೀಡಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ದೇಶದ ಸ್ವಾವಲಂಬನೆಗೆ ನೆರವಾಗುವ ಮತ್ತು ಮಾನವಕುಲಕ್ಕೆ ಪ್ರಯೋಜನ ನೀಡುವಂತಹ ಸ್ಪಷ್ಟ ಸಾಧನೆಗಳನ್ನು ಮಾಡಬೇಕು ಎಂದು ಅವರು ಒತ್ತಿಹೇಳಿದ್ದಾರೆ.

ನವದೆಹಲಿಯ ಭಾರತ್ ಮಂಟಪದಲ್ಲಿ ಅಕ್ಟೋಬರ್ 27ರಿಂದ 29ರವರೆಗೆ ನಡೆಯುತ್ತಿರುವ ಎಮರ್ಜಿಂಗ್ ಸೈನ್ಸ್, ಟೆಕ್ನಾಲಜಿ ಅಂಡ್ ಇನ್ನೋವೇಶನ್ ಕಾನ್‌ಕ್ಲೇವ್ (ESTIC) 2026 ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತವು ಇತರ ದೇಶಗಳ ತಂತ್ರಜ್ಞಾನವನ್ನು ಅನುಸರಿಸುವ ಹಂತದಿಂದ ಹೊರಬಂದು, ಹೊಸ ಆವಿಷ್ಕಾರಗಳ ಮೂಲಕ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವತ್ತ ಸಾಗುತ್ತಿದೆ ಎಂದರು.

ಸಂಶೋಧನೆಗೆ ಜನಜೀವನದ ಸ್ಪರ್ಶ ಅಗತ್ಯ

ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದಲ್ಲೇ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಬೃಹತ್ ಲಸಿಕಾ ಅಭಿಯಾನ ನಡೆಸಿದ್ದಲ್ಲದೆ, ಇತರ ದೇಶಗಳಿಗೂ ಲಸಿಕೆ ಪೂರೈಸಿದ ಉದಾಹರಣೆಯನ್ನು ಮೋದಿ ಉಲ್ಲೇಖಿಸಿದರು. ವಿಜ್ಞಾನವು ಪ್ರಯೋಗಾಲಯದ ಗಡಿಯನ್ನು ದಾಟಿ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದಾಗ ಮಾತ್ರ ಅದರ ನಿಜವಾದ ಯಶಸ್ಸು ಸಾಬೀತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಬಾಹ್ಯಾಕಾಶದಿಂದ ಸೆಮಿಕಂಡಕ್ಟರ್‌ವರೆಗೆ ಪ್ರಗತಿ

ಭಾರತದ ಮಂಗಳಯಾನ, ಚಂದ್ರಯಾನ-3, ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಸೆಮಿಕಂಡಕ್ಟರ್ ಕ್ಷೇತ್ರಗಳ ಬೆಳವಣಿಗೆಗಳನ್ನು ಪ್ರಧಾನಿ ಪ್ರಸ್ತಾಪಿಸಿದರು.

ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಇಂಧನ, ಆರೋಗ್ಯ, ಬಾಹ್ಯಾಕಾಶ ಸೇರಿದಂತೆ 12 ಪ್ರಮುಖ ಕ್ಷೇತ್ರಗಳನ್ನು ಒಳಗೊಂಡಿರುವ ಈ ಸಮಾವೇಶವು ಸಂಶೋಧನೆ ಮತ್ತು ಉದ್ಯಮಗಳ ನಡುವಿನ ಸಹಕಾರಕ್ಕೆ ವೇದಿಕೆಯಾಗಿದೆ.

ನವೀನ ಆವಿಷ್ಕಾರಗಳು ದೇಶದ ಸ್ವಾವಲಂಬನೆಯನ್ನು ಬಲಪಡಿಸುವುದರ ಜೊತೆಗೆ ಮಾನವಕುಲದ ಒಳಿತಿಗೂ ಬಳಕೆಯಾಗಬೇಕು ಎಂಬುದು ಮೋದಿ ಅವರ ಸಂದೇಶವಾಗಿದೆ. ಮುಂದಿನ ಮೂರು ವರ್ಷಗಳ ಗುರಿಗಳನ್ನು ಫಲಿತಾಂಶಗಳ ಮೂಲಕ ಅಳೆಯುವಂತೆ ಅವರು ವಿಜ್ಞಾನ ಸಮುದಾಯಕ್ಕೆ ಕರೆ ನೀಡಿದ್ದಾರೆ.

Must Read

Skip to toolbar