October 27, 2026
Tuesday, October 27, 2026
spot_img

ಚೀನಾ ಅತಿಕ್ರಮಣದ ಬಗ್ಗೆ ಸೇನಾಧಿಕಾರಿಯ ಹೆಸರಲ್ಲಿ ನಕಲಿ AI ವಿಡಿಯೋ: ಕಾಂಗ್ರೆಸ್ ಕ್ಷಮೆಯಾಚಿಸಲಿ; ಕಿರಣ್ ರಿಜಿಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚೀನಾ ಅರುಣಾಚಲ ಪ್ರದೇಶದ ಪ್ರದೇಶಗಳ ಮೇಲೆ ಚೀನಾ ನಿಯಂತ್ರಣ ಸಾಧಿಸಿದೆ ಎಂಬುದಾಗಿ ಸೇನಾಕಾರಿಯೇ ಹೇಳಿದ್ದಾರೆ ಎಂದು ಬಿಂಬಿಸುವ ಎಐ-ನಿರ್ಮಿತ ಸುಳ್ಳು ವಿಡಿಯೋವನ್ನು ಪ್ರಸಾರಗೊಳಿಸಿದ ಕಾಂಗ್ರೆಸ್ ಕೃತ್ಯವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಭಾರತೀಯ ಸೇನೆಯ ವರ್ಚಸ್ಸಿಗೇ ಕಳಂಕ ತರುವ ಈ ಹೀನ ಕೃತ್ಯಕ್ಕಾಗಿ ದೇಶದ ಕ್ಷಮೆ ಕೇಳುವಂತೆ ಕಾಂಗ್ರೆಸನ್ನು ಆಗ್ರಹಿಸಿದೆ.

ಲೆ.ಜ.ಗಿರೀಶ್ ಕಾಲಿಯಾ ಅವರದೆಂದು ಹೇಳಲಾದ ಸುಳ್ಳು ವಿಡಿಯೋವೊಂದನ್ನು ಹಂಚಿಕೊಂಡು ಪ್ರಸಾರಗೈದ ಕಾಂಗ್ರೆಸ್ ನಾಯಕರ ಕೃತ್ಯ ಅಕ್ಷಮ್ಯವಾಗಿದ್ದು, ಇದಕ್ಕಾಗಿ ಭಾರತೀಯ ಸೇನೆಯ ಗೌರವಕ್ಕೆ ಧಕ್ಕೆ ಉಂಟು ಮಾಡುವ ಸುಳ್ಳು ಎಐ ವಿಡಿಯೋವವನ್ನು ವೈರಲ್‌ಗೊಳಿಸಿದ್ದಕ್ಕಾಗಿ ಕಾಂಗ್ರೆಸ್ ಲಿಖಿತವಾಗಿ ಕ್ಷಮೆಯಾಚಿಸಲೇಬೇಕು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಒತ್ತಾಯಿಸಿದ್ದಾರೆ.

ಇದು ವಿಶ್ವಾಸಘಾತಕ ಕೃತ್ಯ ಮತ್ತು ನಮ್ಮ ಶತ್ರುಗಳ ನೀಚಕೃತ್ಯಕ್ಕೆ ಸಮನಾಗಿದೆ. ಕಾಂಗ್ರೆಸ್ ಪಕ್ಷವು ಭಾರತದ ಶತ್ರುಗಳ ಪರವಾಗಿ ಹೇಯ ಪ್ರಚಾರವನ್ನು ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದರು.

ಇದಕ್ಕೂ ಮುನ್ನ ಕಾಂಗ್ರೆಸ್ ಸೋಮವಾರ ಚೀನಾ ಅರುಣಾಚಲ ಪ್ರದೇಶದಲ್ಲಿನ 3 ಪ್ರದೇಶಗಳನ್ನು ವಶಪಡಿಸಿಕೊಂಡಿದೆ ಎಂದು ಬಿಂಬಿಸುವ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಅರುಣಾಚಲ ಪ್ರದೇಶದ ಅಸಾಫಿಲಾ, ಲೊಂಗ್ಜು ಮತ್ತು ಟಾಕ್ಸಿಂಗ್ ವಲಯಗಳನ್ನು ವಶಪಡಿಸಿಕೊಂಡಿರುವುದಾಗಿ ಸೇನಾಕಾರಿ ಲೆ.ಜ.ಗಿರೀಶ್ ಕಾಲಿಯಾ (ಜಿಒಸಿ ಸ್ಪಿಯರ್ ಕಾರ್ಪ್ಸ್) ಹೇಳಿದ್ದಾರೆ. ಅಗತ್ಯ ವಸ್ತುಗಳಿಗೆ ಬೇಡಿಕೆಯಿದ್ದರೂ, ಚೀನಾದ ಬದಲಿಗೆ ‘ಝೆನ್-ಜಿ’ಗಳ ವಿರುದ್ಧ ಸೇನೆಯನ್ನು ನಿಯೋಜಿಸಲಾಗಿದೆ. ಇದು ನಾಚಿಕೆಗೇಡು ಎಂಬ ಆಘಾತಕಾರಿ ಸುಳ್ಳು ಮಾಹಿತಿಯನ್ನು ಕಾಂಗ್ರೆಸ್ ನಾಯಕಿ ರಿತು ಚೌಧರಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.

ಚೀನಾ ಅತಿಕ್ರಮಣ ವರದಿ ತಿರಸ್ಕರಿಸಿದ ಸೇನೆ

ಭಾರತೀಯ ಸೇನೆಯ ಫ್ಯಾಕ್ಟ್-ಚೆಕ್ ಘಟಕವು ಈ ವೈರಲ್ ಆದ ವಿಡಿಯೋವನ್ನು ತಿರಸ್ಕರಿಸಿದ್ದು, ಲೆ.ಜ.ಗಿರೀಶ್ ಕಾಲಿಯಾ ಅವರದ್ದು ಎಂದು ಹೇಳಲಾದ ನಕಲಿ ಹೇಳಿಕೆಗಳೊಂದಿಗೆ ಡಿಜಿಟಲ್ ರೂಪದಲ್ಲಿ ಮಾರ್ಪಡಿಸಿದ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಚೀನಾ ಅರುಣಾಚಲ ಪ್ರದೇಶದ ಅಸಾಫಿಲಾ, ಲಾಂಗ್‌ಜೌ ಮತ್ತು ಟ್ಯಾಕ್ಸಿಂಗ್ ವಲಯವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಮತ್ತು ಭಾರತೀಯ ಸೇನೆಗೆ ಅಗತ್ಯ ಸರಬರಾಜುಗಳನ್ನು ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ತಪ್ಪು ದಾರಿಗೆಳೆಯುವ ಈ ವೀಡಿಯೊವು, ಹಿರಿಯ ಭಾರತೀಯ ಸೇನಾ ಅಕಾರಿಯೊಬ್ಬರು ಸೋರಿಕೆಯಾದ ತಪ್ಪೊಪ್ಪಿಗೆಯದು ಎಂಬಂತೆ ಕಪೋಲಕಲ್ಪಿತ ಹೇಳಿಕೆಗಳನ್ನು ಬಿಂಬಿಸಲು ಪ್ರಯತ್ನಿಸಲಾಗುತ್ತಿದೆ. ಲೆ.ಜ.ಗಿರೀಶ್ ಕಾಲಿಯಾ ಅವರ ಹೇಳಿಕೆಗಳನ್ನು ತಪ್ಪಾಗಿ ಬಿಂಬಿಸಲು ವಿಡಿಯೋ ಸಿಂಥೆಟಿಕ್ ಜನರೆಟೆಡ್ ಮಾಹಿತಿಯನ್ನು ಬಳಸಲಾಗಿದೆ ಎಂದು ಸೇನೆ ಅಧಿಕೃತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:

ವಾಸ್ತವ ಏನು? 2023ರ ವರದಿ!

ಹಾಗಾದರೆ ಈ ವಿಡಿಯೋದ ಹಿಂದಿರುವ ವಾಸ್ತವವೇನು ಎಂಬುದನ್ನು ಪರಿಶೀಲಿಸಿದಾಗ, ಇದರ ಮೂಲ ದೃಶ್ಯಾವಳಿಗಳು 2023ರ ಅ.27ರಂದು ಜಮ್ಮು -ಕಾಶ್ಮೀರದ ಕುಪ್ವಾರಾದಲ್ಲಿ ಆಗಿನ ಜಿಒಸಿ 28 ಪದಾತಿ ದಳದ ಮೇ.ಜ. ಗಿರೀಶ್ ಕಾಲಿಯಾ ಅವರು ನೀಡಿದ ಪತ್ರಿಕಾಗೋಷ್ಠಿಗೆ ಸಂಬಂಧಿಸಿದ್ದಾಗಿವೆ. ಆಗ ಅವರು ನಿಯಂತ್ರಣ ರೇಖೆಯಾದ್ಯಂತ ಒಳನುಸುಳುವಿಕೆ ಪ್ರಯತ್ನಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಭಯೋತ್ಪಾದಕರು ಒಳನುಸುಳಲು ನಡೆಸಿದ 10 ವಿಫಲ ಪ್ರಯತ್ನಗಳು, 27 ಭಯೋತ್ಪಾದಕರ ನಿಗ್ರಹ ಮತ್ತು ಯುದ್ಧೋಚಿತ ದಾಸ್ತಾನು ಹಾಗೂ ಮಾದಕವಸ್ತುಗಳನ್ನು ವಶಪಡಿಸಿಕೊಂಡ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

ಅರುಣಾಚಲ ಪ್ರದೇಶದ ಮೇಲೆ ಚೀನಾದ ನಿಯಂತ್ರಣ ಅಥವಾ ಭಾರತೀಯ ಸೇನೆಗೆ ಸರಬರಾಜು ನಿರಾಕರಣೆಯ ಬಗ್ಗೆ ಅವರು ಅಂತಹ ಯಾವುದೇ ಹೇಳಿಕೆಗಳನ್ನು ನೀಡಿರಲಿಲ್ಲ.

Must Read

Skip to toolbar