ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಟಿ ಸಿಟಿ ಬೆಂಗಳೂರಿನ ‘ನಮ್ಮ ಮೆಟ್ರೋ’ದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ಟೋಬರ್ 27ರಂದು ಸಂಜೆ ಸುಮಾರು 4:30ಕ್ಕೆ ವೈಟ್‌ಫೀಲ್ಡ್‌ನ ಕಾಡುಗೋಡಿ ರಸ್ತೆ ಬಳಿಯ ಮೆಟ್ರೋ ರೈಲಿನಲ್ಲಿ ಸಾಗುತ್ತಿದ್ದ ‘ಸೌಪಿಕಾ’ ಎಂಬ ಯುವತಿಯನ್ನು ಆಕೆಯ ಅನುಮತಿಯಿಲ್ಲದೆ ವ್ಯಕ್ತಿಯೊಬ್ಬ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದಾಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ವ್ಯಕ್ತಿಯ ಅಸಭ್ಯ ವರ್ತನೆಯನ್ನು ಗಮನಿಸಿದ ತಕ್ಷಣವೇ ಸೌಪಿಕಾ ಭಯಪಡದೆ ಆತನನ್ನು ನೇರವಾಗಿ ಪ್ರಶ್ನಿಸಿದ್ದಾರೆ. ನಿಲ್ದಾಣ ಬಂದ ತಕ್ಷಣ ಆ ವ್ಯಕ್ತಿ ಓಡಿಹೋಗಲು ಯತ್ನಿಸಿದಾಗ, ಆಕೆಯು ಆತನನ್ನು ಬೆನ್ನಟ್ಟಿ ಮೊಬೈಲ್ ಕಸಿದುಕೊಂಡು ಭದ್ರತಾ ಸಿಬ್ಬಂದಿಗೆ ನೀಡಿದ್ದಾರೆ. ಆದರೆ, ಆ ವ್ಯಕ್ತಿ ಮೊಬೈಲ್ ಮರಳಿ ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಈ ಘಟನೆಯ ಸಂಪೂರ್ಣ ವಿವರವನ್ನು ಸೌಪಿಕಾ ವೀಡಿಯೋ ಮೂಲಕ ಹಂಚಿಕೊಂಡಿದ್ದು, “ನಾನು ಫಾರ್ಮಲ್ ಉಡುಪಿನಲ್ಲಿದ್ದೆ, ಇಡೀ ದೇಹ ಸಂಪೂರ್ಣವಾಗಿ ಮುಚ್ಚಲ್ಪಟ್ಟಿತ್ತು. ಹೀಗಿದ್ದರೂ ಆತ ನನ್ನ ವೀಡಿಯೋ ಚಿತ್ರೀಕರಿಸಿದ್ದಾನೆ. ನನ್ನ ಬಟ್ಟೆಯ ಬಗ್ಗೆ ಯಾರೂ ಪ್ರಶ್ನೆ ಮಾಡುವುದು ಬೇಡ. ಇಂತಹ ವಿಕೃತ ಮನಸ್ಥಿತಿಯ ವ್ಯಕ್ತಿಗಳನ್ನು ಹಿಡಿದು ಆತನ ಕುಟುಂಬ, ಕಚೇರಿ ಹಾಗೂ ಇಡೀ ಸಮಾಜಕ್ಕೆ ಆತನ ನಿಜರೂಪವನ್ನು ತೋರಿಸಬೇಕು,” ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಂತ್ರಸ್ತೆ ನೆರವು ಕೇಳಿದರೂ ಭದ್ರತಾ ಸಿಬ್ಬಂದಿ ಆರೋಪಿಯನ್ನು ತಡೆಯಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರು ಮೆಟ್ರೋ ಭದ್ರತಾ ಲೋಪದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣುಮಕ್ಕಳು ಧೈರ್ಯವಾಗಿ ದೂರು ನೀಡಿದಾಗ ಅವರಿಗೆ ಸೂಕ್ತ ಬೆಂಬಲ ಸಿಗದಿರುವುದು ದುರದೃಷ್ಟಕರ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
https://www.instagram.com/reel/DfAerOgzeV3/?utm_source=ig_web_button_share_sheet
ಈ ಸಂಬಂಧ ಸೌಪಿಕಾ ಅವರು ಮೆಟ್ರೋ ಅಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದು, ಏಳು ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವೈಟ್‌ಫೀಲ್ಡ್ ವಿಭಾಗದ ಪೊಲೀಸರು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.



