October 28, 2026
Wednesday, October 28, 2026
spot_img

ಕಾರ್ಮಿಕರ ಸುರಕ್ಷತೆಗೆ ಆದ್ಯತೆ ನೀಡಿ, ನಿಯಮ ಉಲ್ಲಂಘಿಸಿದರೆ ಕ್ರಮ: ಬೋಟ್‌ ಮಾಲಿಕರಿಗೆ ಸಚಿವ ಬಸವಂತಪ್ಪ ಎಚ್ಚರಿಕೆ

ಹೊಸದಿಗಂತ ವರದಿ ಕಾರವಾರ:

ಮೀನುಗಾರಿಕೆ ಬೋಟುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ಬೋಟುಗಳ ಮಾಲಿಕರು ಆದ್ಯತೆ ನೀಡಬೇಕಿದ್ದು ಕಾರ್ಮಿಕರ ಹಿತರಕ್ಷಣೆ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸುವ ಬೋಟು ಮಾಲಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.

ತದಡಿಯಲ್ಲಿ ವಿಷಗಾಳಿ ಸೇವಿಸಿ ಮೃತಪಟ್ಟ ಮೂವರು ಬೋಟ್ ಕಾರ್ಮಿಕರ ಕುಟುಂಬಗಳಿಗೆ ಸರ್ಕಾರದಿಂದ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ಚೆಕ್ ವಿತರಿಸಿದ ಅವರು ತದಡಿ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದುಡಿದು ಕುಟುಂಬ ನಿರ್ವಹಣೆ ನಡೆಸುತ್ತಿದ್ದ ಬೋಟ್ ಮೀನುಗಾರ ಕಾರ್ಮಿಕರು ಮೃತಪಟ್ಟಿರುವುದು ದೊಡ್ಡ ದುರಂತವಾಗಿದ್ದು ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ಮರುಕಳಿಸದ ರೀತಿಯಲ್ಲಿ ಎಚ್ಚರಿಕೆ ವಹಿಸಬೇಕಿದೆ, ಬೋಟುಗಳು ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ ಎಂದರು.

ತದಡಿಯಲ್ಲಿ ನಡೆದ ದುರ್ಘಟನೆಯ ಕುರಿತಂತೆ ಸಮಗ್ರ ತನಿಖೆ ಕೈಗೊಂಡು ವರದಿ ನೀಡುವಂತೆ ಸಚಿವ ಬಸವಂತಪ್ಪ ಮೀನುಗಾರಿಕೆ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತದಡಿ ಮೀನುಗಾರಿಕೆ ಬಂದರಿನಲ್ಲಿ ಹೂಳು ತುಂಬಿ ಬೋಟುಗಳು ಮುಳುಗಿರುವ ಕುರಿತು ಸಚಿವರ ಗಮನಕ್ಕೆ ತಂದಾಗ ಆ ಕುರಿತಂತೆ ಪ್ರತಿಕ್ರಿಯಿಸಿದ ಅವರು ಹೂಳು ತೆಗೆಯಲಾಗಿದೆ ಆದರೂ ಹೂಳು ತುಂಬಿರುವ ಕುರಿತಂತೆ ದೂರು ಕೇಳಿ ಬಂದಿದ್ದು ಆ ಕುರಿತಂತೆ ಸೂಕ್ತ ತನಿಖೆ ಕೈಗೊಳ್ಳುವುದಾಗಿ ತಿಳಿಸಿದರು.

ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ರವಿ ತಳೇಕರ್, ಪೊಲೀಸ್ ವರಿಷ್ಠ ದೀಪನ್.ಎಂ.ಎನ್ ಉಪಸ್ಥಿತರಿದ್ದರು.

ಇದನ್ನೂ ಓದಿ:

ಗೋಕರ್ಣ ಸಮೀಪದ ತದಡಿ ಮೀನುಗಾರಿಕೆ ಬಂದರಿನಲ್ಲಿ ಮಂಗಳವಾರ ಸಂಜೆ ಮೀನುಗಾರಿಕೆ ಬೋಟಿನಲ್ಲಿದ್ದ ಚಮನ್ ಮೀನು ಖಾಲಿ ಮಾಡಿ ಮೀನು ಸಂಗ್ರಹ ಮಾಡಿದ್ದ ಶೈತ್ಯಾಗಾರ ಸ್ವಚ್ಚಗೊಳಿಸುವ ಸಂದರ್ಭದಲ್ಲಿ ವಿಷಗಾಳಿಯಿಂದ ಅಸ್ವಸ್ಥಗೊಂಡು ಕುಮಟ ತಾಲೂಕಿನ ಕಾಗಾಲ್ ನಿವಾಸಿ ನೌಶಾದ್ (37)ಹಬ್ಬಣಗೇರಿಯ ಅಮೀನ್ (39) ಮತ್ತು ವನಳ್ಳಿಯ ಅಮನ್(20) ಮೃತಪಟ್ಟಿದ್ದರು.

ಬೆಟ್ಕುಳಿಯ ಯಾಕೂಬ್ ಮತ್ತು ಸಂತೆಗುಳಿಯ ಅಬ್ದುಲ್ ಖಾದರ್ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾಕೂಬ್ ಅವರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಕುಟುಂಬಗಳಿಗೆ ಭೇಟಿ ನೀಡಿ ಪರಿಹಾರ ವಿತರಿಸಿದ ಸಚಿವರು ಮೃತ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸರ್ಕಾರದಿಂದ ನೆರವು ಒದಗಿಸುವ ಭರವಸೆ ನೀಡಿದರು.

Must Read

Skip to toolbar