ಹೊಸದಿಗಂತ ಡಿಜಿಟಲ್ ಡೆಸ್ಕ್:
ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸುವ ಹಾಸನದ ಅಧಿದೇವತೆ ತಾಯಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಇಂದು ಶುಭ ಚಾಲನೆ ದೊರೆಯಿತು.
ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12:28ಕ್ಕೆ ಅರಸು ವಂಶಸ್ಥ ನಂಜರಾಜೆ ಅರಸ್ ಸಂಪ್ರದಾಯದಂತೆ ಗೊನೆಯುಳ್ಳ ಬಾಳೆ ಕಂಬ ಕಡಿದ ನಂತರ ಹಲವು ಗಣ್ಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲನ್ನು ತೆರೆಯಲಾಯಿತು. ಈ ವೇಳೆ ಹಾಜರಿದ್ದ ನೂರಾರು ಭಕ್ತರು, ಹಾಸನಾಂಬೆಗೆ ಜಯವಾಗಲಿ ಎಂದು ವಿಶೇಷ ಘೋಷವಾಕ್ಯ ಮೊಳಗಿಸಿದರು.
ನಾಡಹಬ್ಬದಂತೆಯೇ ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಭಕ್ತರು ಹಾಸನದತ್ತ ಮುಖ ಮಾಡಿದ್ದಾರೆ. ಈ ಬಾರಿ ಭಕ್ತಾದಿಗಳಲ್ಲಿ ನೂಕು ನುಗ್ಗಲು ಆಗದಂತೆ ಎರಡು ಪ್ರತ್ಯೇಕ ಕೌಂಟರ್ಗಳನ್ನು ತೆರೆಯಲಾಗಿದೆ. ಒಂದು ಮಾಮೂಲಿ ಕ್ಯೂ, ಇನ್ನೊಂದು 300 ರೂಪಾಯಿಯ ಕ್ಯೂ ಹಾಗೂ ಮತ್ತೊಂದು 1,000 ರೂಪಾಯಿಯ ಕ್ಯೂ ಇರಲಿದೆ. ಇನ್ನು ಗೋಲ್ಡನ್ ಪಾಸ್ ಹೊಂದಿರುವ ಜನರು ಬೆಳಗ್ಗೆ ಎಂಟು ಗಂಟೆಯಿಂದ ಹತ್ತು ಗಂಟೆಯ ಒಳಗೆ ತಮ್ಮ ದರುಶನವನ್ನು ಮುಗಿಸಿಕೊಳ್ಳಬೇಕಿದೆ. ಒಂದು ಗೋಲ್ಡ್ ಕಾರ್ಡ್ನಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ದೊರೆಯಲಿದೆ.
ಇನ್ನು ವಿಐಪಿಗಳು ದರುಶನಕ್ಕೆ ಆಗಮಿಸುವುದಾದರೆ ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30 ಒಳಗೆ ಆಗಮಿಸಬೇಕಾಗಿದೆ. ಜಿಲ್ಲಾಡಳಿತದ ವತಿಯಿಂದಲೇ ವಿಶೇಷ ದರುಶನ ವ್ಯವಸ್ಥೆ ಮಾಡಲಾಗಿದೆ. ಜಾತ್ರೆಯ ಮೊದಲ ಹಾಗೂ ಕೊನೆಯ ದಿನ ಯಾವುದೇ ರೀತಿಯ ಶಿಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಡಳಿತ ಹೇಳಿದೆ. ಈ ಉತ್ಸವಕ್ಕೆ 30 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜೊತೆಗೆ ಸಿಸಿಟಿವಿ, ಡ್ರೋನ್ ಕ್ಯಾಮರಾ ಕಣ್ಗಾವಲು ಇದೆ. ಇನ್ನು ಲಡ್ಡು ಪ್ರಸಾದಕ್ಕೆ 56 ರೂ. ನಿಗದಿಯಾಗಿದ್ದು, ಒಂದು ದೊನ್ನೆ ಪ್ರಸಾದಕ್ಕೆ 17 ರೂಪಾಯಿ ನಿಗದಿಯಾಗಿದೆ.



