October 29, 2026
Thursday, October 29, 2026
spot_img

ಬೇಬಿ, ವಿಲ್ ಯು ಮ್ಯಾರಿ ಮೀ? ಕೆಬಿಸಿ-18 ವೇದಿಕೆಯಲ್ಲಿ ರೋಚಕ ಕಥೆ ಬಿಚ್ಚಿಟ್ಟ ರಣ್‌ಬೀರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳಲ್ಲಿ ಪ್ರಪೋಸಲ್ ದೃಶ್ಯಗಳನ್ನು ನೋಡಿ ಮನಸೋಲುವ ನಮಗೆ, ನಿಜ ಜೀವನದಲ್ಲಿಯೂ ಅಂತಹದ್ದೇ ರೋಮಾಂಚಕ ಕ್ಷಣ ಎದುರಾದರೆ ಹೇಗಿರುತ್ತದೆ? ಬಾಲಿವುಡ್ ನಟ ರಣ್‌ಬೀರ್ ಕಪೂರ್ ಮತ್ತು ನಟಿ ಆಲಿಯಾ ಭಟ್ ಅವರ ನಿಶ್ಚಿತಾರ್ಥದ ಕಥೆ ಕೂಡ ಯಾವುದೇ ಸೂಪರ್‌ಹಿಟ್ ಸಿನಿಮಾಗಿಂತ ಕಮ್ಮಿ ಇಲ್ಲ. ಪ್ರಸಿದ್ಧ ‘ಕೌನ್ ಬನೇಗಾ ಕರೋಡ್‌ಪತಿ 18’ ರಿಯಾಲಿಟಿ ಶೋನಲ್ಲಿ ಈ ದಂಪತಿಯ ಅಪರೂಪದ ಪ್ರೇಮ ನಿವೇದನೆಯ ರಹಸ್ಯವನ್ನು ರಣ್‌ಬೀರ್ ಸ್ವತಃ ಬಿಚ್ಚಿಟ್ಟಿದ್ದಾರೆ.

ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೆಬಿಸಿ-18 ಶೋಗೆ ತಮ್ಮ ‘ರಾಮಾಯಣ’ ಚಿತ್ರತಂಡದೊಂದಿಗೆ ರಣ್‌ಬೀರ್ ಆಗಮಿಸಿದ್ದರು. ಈ ವೇಳೆ ತಮ್ಮ ಪ್ರಪೋಸಲ್ ಕಥೆ ನೆನಪಿಸಿಕೊಂಡ ನಟ, “ನಮ್ಮ ನೆಚ್ಚಿನ ಪ್ರವಾಸಿ ತಾಣವಾದ ಆಫ್ರಿಕಾದ ಮಸಾಯಿ ಮಾರಾ ಕಾಡಿನಲ್ಲಿ ಆಲಿಯಾಗೆ ಪ್ರಪೋಸ್ ಮಾಡಲು ನಿರ್ಧರಿಸಿದ್ದೆ. ಅಲ್ಲಿನ ಗೈಡ್‌ಗೆ ಮೊದಲೇ ಹೇಳಿ ಕಾಡಿನ ಮಧ್ಯೆ ಗಾಡಿ ನಿಲ್ಲಿಸಲು ಸೂಚಿಸಿದ್ದೆ. ಹುಡುಗಿಯರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕಿಕೊಳ್ಳುವುದೆಂದರೆ ತುಂಬಾ ಇಷ್ಟ, ಹೀಗಾಗಿ ದೂರದಿಂದ ಫೋಟೋ ತೆಗೆಯಲು ಗೈಡ್‌ಗೆ ತಿಳಿಸಿ ನಾನು ಕೈಯಲ್ಲಿ ಉಂಗುರ ಹಿಡಿದು ಸಿದ್ಧನಾಗಿದ್ದೆ” ಎಂದಿದ್ದಾರೆ. ಇದಕ್ಕೆ ಬಿಗ್ ಬಿ ಅಮಿತಾಭ್, “ಪ್ರಪೋಸ್ ಮಾಡಿದ್ದಕ್ಕೆ ಸಾಕ್ಷಿ ಇರಬೇಕಲ್ಲವೇ!” ಎಂದು ತಮಾಷೆ ಮಾಡಿದರು.

ನಂತರ ಕಾಡಿನಲ್ಲಿ ನಡೆದ ರೋಮಾಂಚಕ ಕ್ಷಣವನ್ನು ವಿವರಿಸಿದ ರಣ್‌ಬೀರ್, “ನಾವು ನಿಂತಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಮೂರು ಸಿಂಹಗಳು ನಿಂತಿದ್ದವು. ನನ್ನ ಮುಂದೆ ನನ್ನ ಶೇರ್ನಿ (ಆಲಿಯಾ) ನಿಂತಿದ್ದಳು. ಆ ಸಿಂಹಗಳ ನಡುವೆ ನಾನು ಪುಟ್ಟ ಇಲಿಯಂತೆ ಮಂಡಿಯೂರಿ ನಿಂತು ‘ಬೇಬಿ, ವಿಲ್ ಯು ಮ್ಯಾರಿ ಮೀ?’ ಎಂದು ಕೇಳಿದೆ. ಅದು ನನ್ನ ಜೀವನದ ಅತ್ಯಂತ ಸುಂದರ ಹಾಗೂ ಎಂದಿಗೂ ಮರೆಯಲಾಗದ ಕ್ಷಣ” ಎಂದು ಹೇಳಿದರು.

ರಣ್‌ಬೀರ್ ಅವರ ಈ ಧೈರ್ಯ ಮತ್ತು ಪ್ರೀತಿಯ ವಿಭಿನ್ನ ಶೈಲಿಗೆ ಅಮಿತಾಭ್ ಬಚ್ಚನ್ ‘ವೆಲ್ ಡನ್’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಶೇಷ ಸಂಚಿಕೆಯು ಅಕ್ಟೋಬರ್ 30 ರಂದು ಸೋನಿ ಲಿವ್ ಹಾಗೂ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Must Read

Skip to toolbar