October 30, 2026
Friday, October 30, 2026
spot_img

ಭೂತಾನ್‌ನಲ್ಲಿ ಹಿಮನದಿ ಸರೋವರ ಸ್ಫೋಟ; ಅಸ್ಸಾಂ, ಬಂಗಾಳದಲ್ಲಿ ಪ್ರವಾಹದ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭೂತಾನ್‌ನ ಎತ್ತರದ ಹಿಮಾಲಯ ಪ್ರದೇಶದಲ್ಲಿ ಹಿಮನದಿ ಸರೋವರವೊಂದು ಹಠಾತ್‌ ಒಡೆದು ಭಾರೀ ಪ್ರಮಾಣದ ನೀರು ಹಾಗೂ ಅವಶೇಷಗಳು ಮುನ್ನುಗ್ಗುತ್ತಿವೆ. ವೇಗದಲ್ಲಿ ಬರುವ ನೀರು ನದಿಗಳಿಗೆ ನುಗ್ಗಿದ್ದು, ಭಾರತದ ಗಡಿ ಭಾಗದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದತ್ತ ಮುನ್ನುಗ್ಗುತ್ತಿದ್ದು, ತಗ್ಗು ಪ್ರದೇಶದ ಜಿಲ್ಲೆಗಳಿಗೆ ಹೈ ಅಲರ್ಟ್‌ ಘೋಷಿಸಲಾಗಿದೆ.

ತಾಪಮಾನ ಏರಿಕೆ ಮತ್ತು ಮಂಜುಗಡ್ಡೆಯ ನೈಸರ್ಗಿಕ ತಡೆಗೋಡೆಗಳಲ್ಲಿ ಉಂಟಾದ ಅಸ್ಥಿರತೆಯಿಂದಾಗಿ ಭೂತಾನ್‌ನ ಗಾಸಾ ಪ್ರಾಂತ್ಯದ ಮೋಚು ಉಪ ಕಣಿವೆಯಲ್ಲಿರುವ ಸಿಂತಾಫು ಸರೋವರದಲ್ಲಿ ಜಲಸ್ಫೋಟ ಸಂಭವಿಸಿದೆ. ಪ್ರವಾಹದ ನೀರು ಭೂತಾನ್‌ನಿಂದ ಭಾರತದತ್ತ ಹರಿಯುವ ನದಿಗಳಿಗೆ ನೀರು ಸೇರುತ್ತಿರುವ ಕಾರಣ ಮೂಲಸೌಕರ್ಯ, ಕೃಷಿ ಭೂಮಿ ಹಾಗೂ ವಸತಿ ಪ್ರದೇಶಗಳಿಗೆ ಭಾರೀ ಹಾನಿಯಾಗುವ ಆತಂಕ ಎದುರಾಗಿದೆ.

ನದಿ ತೀರದ ನಿವಾಸಿಗಳು ತಕ್ಷಣ ಸುರಕ್ಷಿತ ತಾಣಗಳಿಗೆ ತೆರಳಬೇಕು ಹಾಗೂ ಯಾವುದೇ ಕ್ಷಣ ನುಗ್ಗುವ ನೀರಿಗೆ ತಯಾರಿರಬೇಕು ಎಂದು ಜಿಲ್ಲಾಡಳಿತ ಹೇಳಿದೆ. ಅಸ್ಸಾಂನ ಕೋಕ್ರಝಾರ್‌, ಬಕ್ಸಾ, ಚಿರಾಂಗ್‌ ಹಾಗೂ ಧುಬ್ರಿ, ಪಶ್ವಿಮ ಬಂಗಾಳದ ಜಲ್ಪೈಗುರಿ ಮತ್ತು ಅಲಿಪುರ್ದುವಾರ್‌ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಣೆಯಾಗಿದೆ.

ಪೂರ್ವ ಹಿಮಾಲಯ ಭಾಗದಲ್ಲಿ ತಾಪಮಾನ ಹೆಚ್ಚಾಗುತ್ತಿರುವುದರಿಂದ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಸರೋವರಗಳ ಗಾತ್ರ ಅಪಾಯಕಾರ ಮಟ್ಟದಲ್ಲಿ ಹಿಗ್ಗುತ್ತಿದೆ. ಕೆಲವೇ ಗಂಟೆಗಳಲ್ಲಿ ಹೆಚ್ಚು ಪ್ರಮಾಣದ ನೀರನ್ನು ಹೊರಹಾಕುವ ಶಕ್ತಿ ಇವುಗಳಿಗಿದೆ. ಹೀಗಾಗಿ ಹೈ ಅಲರ್ಟ್‌ ಘೋಷಣೆ ಮಾಡಿರುವ ಜಿಲ್ಲೆಯ ಜನರು ಶೀಘ್ರವೇ ಸೂಕ್ತ ಪ್ರದೇಶಗಳಿಗೆ ತೆರಳುವುದು ಉತ್ತಮವಾಗಿದೆ.

Must Read