ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನದ ಅಧಿದೇವತೆಯಾದ ಹಾಸನಾಂಬೆಯ ಸಾರ್ವಜನಿಕ ದರ್ಶನೋತ್ಸವಕ್ಕೆ ಇಂದು ಮೊದಲ ದಿನವಾಗಿದ್ದು, ಸಾವಿರಾರು ಭಕ್ತಾದಿಗಳು ಬೆಳ್ಳಂಬೆಳಗ್ಗೆಯೇ ಆಗಮಿಸಿ ಕ್ಯೂನಲ್ಲಿ ನಿಂತಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದು, ಕೆಲವರು ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ. ರಾತ್ರಿ ಇದ್ದ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ದೇವಿಯ ದರುಶನಕ್ಕಾಗಿ ರಾತ್ರಿಯಿಡೀ ದೇವಸ್ಥಾನದ ಆವರಣದಲ್ಲಿಯೇ ನಿಂತು ಸಮಯ ಕಳೆದಿದ್ದಾರೆ.
ಇಂದು ಬೆಳಗ್ಗೆ ಆರು ಗಂಟೆಯಿಂದ ದೇವಿ ದರುಶನಕ್ಕೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕ ದರುಶನಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ನವೆಂಬರ್ 10 ರವರೆಗೆ ದೇವಿಯ ದರುಶನಕ್ಕೆ ಅವಕಾಶ ನೀಡಲಾಗಿದೆ. ಇಂದು ಶನಿವಾರವಾದ ಕಾರಣ 24 ಗಂಟೆಗಳ ಕಾಲವೂ ದರುಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರ ಸಂಖ್ಯೆಯ ಅಪಾರವಾಗಿದ್ದು, ಸುಗಮ ದರುಶನಕ್ಕೆ ಎಲ್ಲ ರೀತಿಯ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ.
ಯಾವುದೇ ಹಣ ನೀಡದೇ ಕ್ಯೂನಲ್ಲಿ ನಿಂತು ದೇವಿಯ ದರುಶನ ಪಡೆಯುವವರಿಗೆ ಸಪರೇಟ್ ಕ್ಯೂ, 3೦೦ ರೂಪಾಯಿಯ ಸ್ಪೆಷಲ್ ದರುಶನ ಹಾಗೂ ಸಾವಿರ ರೂಪಾಯಿಯ ಕ್ಯೂ ಕೂಡ ಇದೆ.



