ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಸಂಬಂಧಿಸಿ ರಚಿಸಿರುವ ಎಸ್‌ಐಟಿಯ ನೂತನ ಮುಖ್ಯಸ್ಥರಾಗಿ ಬೆಂಗಳೂರಿನ ಸಿಐಡಿ ವಿಭಾಗದ ಐಜಿಪಿ ಚೇತನ್ ಸಿಂಗ್ ರಾಥೋಡ್ ನಿಯೋಜನೆಗೊಂಡಿದ್ದಾರೆ. ಹಾಸನ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶ್ರೀನಿಧಿ ಅವರನ್ನು ಸದಸ್ಯರನ್ನಾಗಿ ನಿಯೋಜಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಪ್ರಕರಣದ ಎಸ್‌ಐಟಿಯಿಂದ ತನ್ನನ್ನು ಹೊರಗಿಡಿ ಎಂದು ಐಜಿಪಿ ಶಶಿಕುಮಾರ್ ಹಾಗೂ ವೆಂಕಟೇಶ್ ಪ್ರಸನ್ನ ಅವರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಹೊಸ ಮುಖ್ಯಸ್ಥರನ್ನಾಗಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಲಾಗಿದೆ.
ಸೌಜನ್ಯ ಕೇಸ್ ಮರುತನಿಖೆಗೆ ಎಸ್‌ಐಟಿ ಮುಖ್ಯಸ್ಥರಾಗಿ ಐಜಿಪಿ ಶಶಿಕುಮಾರ್ ಅವರನ್ನು ನೇಮಿಸಲಾಗಿತ್ತು. ಈ ನೇಮಕಾತಿಗೆ ಕೆಲ ಹೋರಾಟಗಾರರು ಹಾಗೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಅವರು ಸ್ವಯಂ ನಿರ್ಧಾರದಿಂದ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ ಎಂದೂ ಹೇಳಲಾಗಿದೆ.
ಸೌಜನ್ಯ ಪ್ರಕರಣದ ಎಸ್‌ಐಟಿ ಮರು ತನಿಖೆ ಇನ್ನಷ್ಟು ಚುರುಕಾಗಿದ್ದು, ಬೆಳ್ತಂಗಡಿ ಠಾಣೆಯ ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ಭಾಸ್ಕರ್ ರೈ, ಸಿಐಡಿಯ ಅಂದಿನ ಡಿವೈಎಸ್ಪಿರುದ್ರಮುನಿ, ಪ್ರಥಮ ತನಿಖೆ ನಡೆಸಿದ ಪಿಎಸ್‌ಐ ಯೋಗೀಶ್ ಅವರ ವಿಚಾರಣೆ ಈಗಾಗಲೇ ಆರಂಭವಾಗಿದೆ.



