ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯನ್ನು ವಿಶೇಷ ತನಿಖಾ ತಂಡ ಇನ್ನಷ್ಟು ಚುರುಕುಗೊಳಿಸಿದ್ದು, ಅಂದು ಪ್ರಕರಣದ ತನಿಖೆ ನಡೆಸಿದ್ದ ಹಾಗೂ ಬಳಿಕದ ಬೆಳವಣಿಗೆಗಳ ಸಂಧರ್ಭ ಕರ್ತವ್ಯದಲ್ಲಿದ್ದ 15 ಕ್ಕೂ ಅಧಿಕ ಪೊಲೀಸ್ ಮತ್ತು ತನಿಖಾಧಿಕಾರಿಗಳನ್ನು ಸರದಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದೆ.
ಈಗಾಗಲೇ ಮೂವರು ಹಿಂದಿನ ತನಿಖಾಧಿಕಾರಿಗಳಾಗಿದ್ದ ಬೆಳ್ತಂಗಡಿ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ಭಾಸ್ಕರ್ ರೈ, ಸಿಐಡಿ ವಿಭಾಗದ ಅಂದಿನ ಡಿವೈಎಸ್ಪಿ ರುದ್ರಮುನಿ, ಮೊದಲು ತನಿಖೆ ನಡೆಸಿದ್ದ ಪಿಎಸ್ ಐ ಯೋಗೀಶ್ ಮಂಗಳೂರಿನ ಎಸ್ಐಟಿ ಕಚೇರಿಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
ಈ ಮೂವರು ಅಧಿಕಾರಿಗಳು ಪ್ರಕರಣವನ್ನು ಸೂಕ್ಷ್ಮವಾಗಿ ಗ್ರಹಿಸಿ ತನಿಖೆ ಮಾಡಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ವಿಶೇಷ ತನಿಖಾ ತಂಡ ನೋಟಿಸ್ ನೀಡಿ ವಿಚಾರಣೆ ನಡೆಸಿದೆ. ಈ ಮೂವರು ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಫೈಲ್ಗಳ ಸಮೇತ ಎಸ್ಐಟಿ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.
2012ರಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸೌಜನ್ಯಾಳ ಅತ್ಯಾಚಾರ-ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ದಿ ಮಾಡಿತ್ತು. ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು ಕೈಗೊಂಡಿದ್ದರು. ಬಳಿಕ ಪ್ರಕರಣವನ್ನು ಸಿಐಡಿ, ಸಿಬಿಐ ತನಿಖೆ ನಡೆಸಿತ್ತು. ಹಂತಕ ಪತ್ತೆಯಾಗದಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ಮಾರುತನಿಖೆಗೆ ಆದೇಶ ನೀಡಿತ್ತು.
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪೊಲೀಸರ ಕೆಲಸ ಕಾರ್ಯಗಳ ಬಗ್ಗೆ ಪೋಷಕರು, ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಇದೀಗ ಅಂದು ತನಿಖೆ ನಡೆಸಿದ್ದ ಅಧಿಕಾರಿಗಳು, ಸಿಬ್ಬಂದಿಯನ್ನು ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಇಂದು ಕೂಡ ವಿಚಾರಣೆ ಮುಂದುವರಿದಿದೆ.



