October 30, 2026
Friday, October 30, 2026
spot_img

ಗೌತಮ್ ಗಂಭೀರ್ ನೆಕ್ಸ್ಟ್ ಟಾರ್ಗೆಟ್ ಐಪಿಎಲ್? ಚಾಂಪಿಯನ್ ಮೆಂಟರ್‌ಗೆ ಬಿಗ್ ಡಿಮ್ಯಾಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ತಿಂಗಳುಗಳಿಂದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಭವಿಷ್ಯದ ಕುರಿತು ಸಾಲು ಸಾಲು ಚರ್ಚೆಗಳು ನಡೆಯುತ್ತಲೇ ಇವೆ. 2027ರ ಏಕದಿನ ವಿಶ್ವಕಪ್‌ವರೆಗೆ ಗಂಭೀರ್ ಅವರ ಒಪ್ಪಂದ ಅವಧಿ ಇದೆಯಾದರೂ, ಸಮಯಕ್ಕಿಂತ ಮುಂಚಿತವಾಗಿಯೇ ಅವರನ್ನು ಹುದ್ದೆಯಿಂದ ಕೆಳಗಿಳಿಸಬಹುದು ಎಂಬ ಸುದ್ದಿಗಳು ಆಗಾಗ ಸದ್ದು ಮಾಡುತ್ತಿದ್ದವು. ಆದರೆ ಮಾಜಿ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅಧಿಕಾರದಿಂದ ಹೊರಬಂದ ಬಳಿಕ ಈ ಊಹಾಪೋಹಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ. ಇದರ ನಡುವೆಯೇ, ಕ್ರಿಕೆಟ್ ವಲಯದಲ್ಲಿ ಮತ್ತೊಂದು ಕುತೂಹಲಕಾರಿ ಸುದ್ದಿ ಸಂಚಲನ ಸೃಷ್ಟಿಸಿದೆ.

ಟೀಂ ಇಂಡಿಯಾದ ಕೋಚ್ ಹುದ್ದೆ ಮುಗಿದ ತಕ್ಷಣವೇ ಗೌತಮ್ ಗಂಭೀರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲವು ಐಪಿಎಲ್ ಫ್ರಾಂಚೈಸಿಗಳು ಈಗಿನಿಂದಲೇ ಆಸಕ್ತಿ ತೋರಿಸುತ್ತಿವೆ. ವರದಿಗಳ ಪ್ರಕಾರ, ಕನಿಷ್ಠ 4 ಪ್ರಮುಖ ಐಪಿಎಲ್ ತಂಡಗಳು ಗಂಭೀರ್ ಅವರನ್ನು ಮೆಂಟರ್ ಅಥವಾ ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲು ತೆರೆಮರೆಯಲ್ಲಿ ಪ್ರಯತ್ನ ಆರಂಭಿಸಿವೆ. ಟೀಂ ಇಂಡಿಯಾ ಮತ್ತು ಐಪಿಎಲ್‌ನಲ್ಲಿ ಗಂಭೀರ್ ಹೊಂದಿರುವ ಅನುಭವ ಹಾಗೂ ನಾಯಕ-ಮೆಂಟರ್ ಆಗಿ ಸಾಧಿಸಿದ ಯಶಸ್ಸೇ ಈ ಬೇಡಿಕೆಗೆ ಮುಖ್ಯ ಕಾರಣವಾಗಿದೆ.

ಗಂಭೀರ್ ಅವರನ್ನು ಮತ್ತೆ ತಮ್ಮ ಗೂಡಿಗೆ ಕರೆತರಲು ಸಾಲಿನಲ್ಲಿ ನಿಂತಿರುವ ತಂಡಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಸ್ಥಾನದಲ್ಲಿದೆ. 2024ರ ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದ ಗಂಭೀರ್, ಬರೋಬ್ಬರಿ 10 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿ ತಂಡಕ್ಕೆ ಕಪ್ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ 2028ರ ಐಪಿಎಲ್ ಆವೃತ್ತಿಯಿಂದ ಗಂಭೀರ್ ಅವರನ್ನು ಮತ್ತೆ ಮೆಂಟರ್ ಆಗಿ ನೇಮಿಸಿಕೊಂಡು ಹೊಸ ಪಯಣ ಆರಂಭಿಸಲು ಕೆಕೆಆರ್ ಕಾತುರದಿಂದ ಕಾಯುತ್ತಿದೆ.

ಕೆಕೆಆರ್ ಮಾತ್ರವಲ್ಲದೆ ರಾಜಸ್ಥಾನ್ ರಾಯಲ್ಸ್ ಕೂಡ ಗಂಭೀರ್ ಅವರನ್ನು ತಮ್ಮ ತಂಡಕ್ಕೆ ಕರೆತರಲು ಉತ್ಸುಕವಾಗಿದೆ. ಈ ಹಿಂದೆ ಕೂಡ ರಾಜಸ್ಥಾನ್ ಫ್ರಾಂಚೈಸಿ ಈ ಕುರಿತು ಗಂಭೀರ್ ಅವರೊಂದಿಗೆ ಮಾತುಕತೆ ನಡೆಸಿತ್ತು ಎನ್ನಲಾಗಿದೆ. ಇನ್ನುಳಿದ ಎರಡು ತಂಡಗಳ ಹೆಸರುಗಳು ಬಹಿರಂಗವಾಗಿಲ್ಲವಾದರೂ, ಅದರಲ್ಲಿ ಒಂದು ತಂಡ ಐಪಿಎಲ್‌ನ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಾದ ಚೆನ್ನೈ ಸೂಪರ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ಆಗಿರಬಹುದು ಎನ್ನಲಾಗುತ್ತಿದೆ. ಮತ್ತೊಂದು ತಂಡ ಈವರೆಗೆ ಒಮ್ಮೆಯೂ ಪ್ರಶಸ್ತಿ ಗೆಲ್ಲದ ಫ್ರಾಂಚೈಸಿಯಾಗಿದೆ.

ಸದ್ಯಕ್ಕೆ ಬಿಸಿಸಿಐ ಒಪ್ಪಂದದಂತೆ 2027ರ ವಿಶ್ವಕಪ್‌ವರೆಗೆ ಗಂಭೀರ್ ಟೀಂ ಇಂಡಿಯಾ ಜೊತೆಯಲ್ಲೇ ಮುಂದುವರಿಯಲಿದ್ದು, ಆ ಬಳಿಕ ಅವರ ಐಪಿಎಲ್ ಮರುಪ್ರವೇಶ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದುನೋಡಬೇಕಿದೆ.

Must Read