ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನಸಾಮಾನ್ಯರಿಗೆ ಕೆಎಂಎಫ್ (KMF) ಬಿಗ್ ಶಾಕ್ ನೀಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 8 ರೂಪಾಯಿ ಹೆಚ್ಚಳ ಮಾಡಿದ್ದ ಸರ್ಕಾರ, ಈಗ ಅದರ ಬೆನ್ನಲ್ಲೇ ಮೊಸರಿನ ಬೆಲೆಯನ್ನೂ ಭಾರಿ ಪ್ರಮಾಣದಲ್ಲಿ ಏರಿಸಿದೆ. ಪರಿಷ್ಕೃತಗೊಂಡ ಈ ಹೊಸ ದರಗಳು ನವೆಂಬರ್ 1ರಿಂದಲೇ ಜಾರಿಗೆ ಬರಲಿವೆ.
ಹಾಲಿನ ದರ ಏರಿಕೆಯಿಂದ ಈಗಾಗಲೇ ಕಂಗಾಲಾಗಿದ್ದ ಮಧ್ಯಮ ವರ್ಗದ ಜನರಿಗೆ, ನಿತ್ಯದ ಊಟಕ್ಕೆ ಬೇಕಾಗುವ ಮೊಸರಿನ ಬೆಲೆ ಏರಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೊಸರಿನ ಹೊಸ ದರ ಪಟ್ಟಿ ಎಷ್ಟು?
ಹಳೆಯ ಬೆಲೆ 28 ರೂಪಾಯಿ ಇತ್ತು, ಈಗ 6 ರೂಪಾಯಿ ಹೆಚ್ಚಳವಾಗಿ 34 ರೂಪಾಯಿಗೆ ಏರಿದೆ. ಹಳೆಯ ಬೆಲೆ 54 ರೂಪಾಯಿ ಇತ್ತು, ಈಗ ಬರೋಬ್ಬರಿ 14 ರೂಪಾಯಿ ದುಬಾರಿಯಾಗಿ 68 ರೂಪಾಯಿಗೆ ತಲುಪಿದೆ.
ಬೆಲೆ ಏರಿಕೆಗೆ ಸರ್ಕಾರದ ಸಮರ್ಥನೆ ಏನು?
ಈ ದಿಢೀರ್ ಬೆಲೆ ಏರಿಕೆಗೆ ರಾಜ್ಯದಲ್ಲಿನ ಬರಪರಿಸ್ಥಿತಿ ಮತ್ತು ಹೈನುಗಾರಿಕೆಯ ನಿರ್ವಹಣಾ ವೆಚ್ಚ ದುಬಾರಿಯಾಗಿರುವುದೇ ಕಾರಣ ಎಂದು ಸರ್ಕಾರ ಹೇಳಿದೆ. ನಷ್ಟದಲ್ಲಿರುವ ರೈತರನ್ನು ರಕ್ಷಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎನ್ನಲಾಗಿದೆ.
ಹೆಚ್ಚಾದ ಹಣ ಯಾರ ಜೇಬಿಗೆ ಸೇರುತ್ತೆ?
ಹಾಲಿನ ದರದಲ್ಲಿ ಹೆಚ್ಚಳ ಮಾಡಲಾದ 8ರೂ. ಮೊತ್ತದಲ್ಲಿ 7ರೂ. ನೇರವಾಗಿ ಹಾಲು ಉತ್ಪಾದಕ ರೈತರ ಖಾತೆಗೆ ಸಹಾಯಧನವಾಗಿ ತಲುಪಲಿದೆ. ಇದರಿಂದ ರೈತರಿಂದ ಖರೀದಿಸುವ ಹಾಲಿನ ದರ ಲೀಟರ್ಗೆ 40 ರಿಂದ 42 ರೂ.ಕ್ಕೆ ಏರಿಕೆಯಾಗಲಿದೆ. ಇನ್ನುಳಿದ 1ರೂ. ಹಣವನ್ನು ಹಾಲು ಒಕ್ಕೂಟಗಳು (KMF) ತಮ್ಮ ಮೇವು, ಸಾಗಣೆ ಹಾಗೂ ಪ್ಯಾಕೇಜಿಂಗ್ ವೆಚ್ಚವನ್ನು ನಿಭಾಯಿಸಲು ಬಳಸಿಕೊಳ್ಳಲಿವೆ.
ಇದನ್ನೂ ಓದಿ:
ಸರ್ಕಾರ ರೈತರ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದರೂ, ಸಾಮಾನ್ಯ ಗ್ರಾಹಕರು ಮಾತ್ರ “ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೀಗೆ ಏರುತ್ತಾ ಹೋದರೆ ಬದುಕು ನಡೆಸುವುದು ಹೇಗೆ?” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.



