ಹೊಸದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ದೆಹಲಿಯಲ್ಲಿ ನಡೆದ ತಮ್ಮ ಅದ್ಧೂರಿ ಸಂಗೀತ ರಸ ಸಂಜೆಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ತಮ್ಮ ಮೇಲಿದ್ದ ಟೀಕೆಗಳಿಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೂನ್ ತಿಂಗಳಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ, “ನಾನೊಬ್ಬ ಕಲಾವಿದ ಅಷ್ಟೇ” ಎಂದು ಹೇಳುವ ಮೂಲಕ ತಟಸ್ಥವಾಗಿದ್ದರೆಂಬ ಟೀಕೆ ಕಾಕ್ರೋಚ್ ಜನತಾ ಪಾರ್ಟಿಯಿಂದ ಬಂದಿತ್ತು. ಇದಕ್ಕೆ ನೇರವಾಗಿಯೇ ಉತ್ತರಿಸಿದ ದಿಲ್ಜಿತ್, “ನಾನು ಕಲಾವಿದನಾಗಿ ಎಲ್ಲರನ್ನೂ ಪ್ರೀತಿಸುತ್ತೇನೆ. ನಾನು ಮೌನವಾಗಿದ್ದೇನೆ, ನನ್ನನ್ನು ಮೌನವಾಗಿಯೇ ಇರಲು ಬಿಡಿ. ನಾನು ನಿಮಗಾಗಿಯೇ ಇದ್ದೇನೆ, ಆದರೆ ಪಂಜಾಬಿಗಳಿಗೆ ಹೇಗೆ ಹೋರಾಡಬೇಕೆಂದು ಯಾರೂ ಕಲಿಸಿಕೊಡಬೇಕಿಲ್ಲ!” ಎಂದು ಹೇಳಿದರು.
ತಮ್ಮ ಅಭಿನಯದ ‘ಸತ್ಲುಜ್’ ಸಿನಿಮಾದ ಬಗ್ಗೆಯೂ ವೇದಿಕೆಯಲ್ಲಿ ಲೇವಡಿ ಮಾಡಿದವರಿಗೆ ದಿಲ್ಜಿತ್ ಖಾರವಾಗಿಯೇ ಮರುಪ್ರಶ್ನೆ ಹಾಕಿದರು. ಪಂಜಾಬ್‌ನ ಹಕ್ಕುಗಳಿಗಾಗಿ ಮತ್ತು ಅನ್ಯಾಯದ ವಿರುದ್ಧ ತಮ್ಮ ಕಲಾ ಮಾಧ್ಯಮದ ಮೂಲಕ ಸದಾ ಹೋರಾಡುತ್ತಲೇ ಬಂದಿರುವುದಾಗಿ ಗಾಯಕ ಅಭಿಮಾನಿಗಳ ಮುಂದೆ ಸ್ಪಷ್ಟಪಡಿಸಿದರು.
ದಿಲ್ಜಿತ್ ಅವರ ಈ ಗಂಭೀರ ಹೇಳಿಕೆಯ ಬೆನ್ನಲ್ಲೇ, ಸಿಜೆಪಿ ಅಧ್ಯಕ್ಷ ಅಭಿಜೀತ್ ದೀಪ್ಕೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ವಿವಾದವನ್ನು ತಣ್ಣಗಾಗಿಸಲು ಯತ್ನಿಸಿದ್ದಾರೆ. “ಪಾಜಿ, ಜೂನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಿಮ್ಮ ಹೇಳಿಕೆಯಿಂದ ನಮಗೆ ಕೊಂಚ ಬೇಸರವಾಗಿದ್ದು ನಿಜ. ಆದರೆ ಅದು ನಿಮ್ಮ ಮೇಲಿನ ವೈಯಕ್ತಿಕ ದ್ವೇಷದಿಂದಲ್ಲ. ನೀವು ಸದಾ ಸತ್ಯ ಮತ್ತು ನ್ಯಾಯದ ಪರ ಧ್ವನಿ ಎತ್ತುವ ವ್ಯಕ್ತಿಯಾಗಿದ್ದರಿಂದ ನಮಗೆ ನಿರೀಕ್ಷೆ ಹೆಚ್ಚಿತ್ತು” ಎಂದು ದೀಪ್ಕೆ ಬರೆದುಕೊಂಡಿದ್ದಾರೆ.
https://www.instagram.com/p/DfIc-Itk6G9/?utm_source=ig_web_button_share_sheet
ತಮ್ಮ ಪೋಸ್ಟ್‌ನಲ್ಲಿ ಮೇ ತಿಂಗಳಲ್ಲಿ ಚಿಕಾಗೋದಲ್ಲಿ ನಡೆದ ದಿಲ್ಜಿತ್ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರವನ್ನು ಹಂಚಿಕೊಂಡ ದೀಪ್ಕೆ, “ನಾನು ಇಂದಿಗೂ ನಿಮ್ಮ ದೊಡ್ಡ ಅಭಿಮಾನಿ. ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟಕ್ಕೇರಿಸಿದ ನಿಮ್ಮ ಸತ್ಯಸಂಧತೆ ಮತ್ತು ಶ್ರಮಕ್ಕೆ ನನ್ನ ಗೌರವ ಸದಾ ಇರುತ್ತದೆ. ಒಂದು ಸಣ್ಣ ಭಿನ್ನಾಭಿಪ್ರಾಯ ಅಥವಾ ಗೊಂದಲ ನಮ್ಮ ನಡುವಿನ ಅಭಿಮಾನವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ” ಎಂದು ಬರೆದು ವಿವಾದಕ್ಕೆ ಸುಖಾಂತ್ಯ ಹಾಡುವ ಸುಳಿವು ನೀಡಿದ್ದಾರೆ.



