October 31, 2026
Saturday, October 31, 2026
spot_img

ಕೇವಲ ತ್ಯಾಗದ ಪ್ರತೀಕವಲ್ಲ ಸೀತೆ: ‘ರಾಮಾಯಣ’ದಲ್ಲಿ ಸಾಯಿ ಪಲ್ಲವಿಯ ಸಾಹಸ ದೃಶ್ಯ ಹೇಗಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಖ್ಯಾತ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಬೃಹತ್ ಬಜೆಟ್‌ನ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ಕುರಿತು ದಿನಕ್ಕೊಂದು ರೋಚಕ ಮಾಹಿತಿ ಹೊರಬೀಳುತ್ತಿದೆ. ಈ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರದ ಕುರಿತು ಕುತೂಹಲಕಾರಿ ಸಂಗತಿಯೊಂದು ರಿವೀಲ್ ಆಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಕೇವಲ ಶಾಂತಸ್ವರೂಪಿ ಸೀತೆಯಾಗಿ ಮಾತ್ರವಲ್ಲದೆ, ಖಡ್ಗ ಹಿಡಿದು ಹೋರಾಡುವ ಬಲಿಷ್ಠ ವಾರಿಯರ್ ಪ್ರಿನ್ಸೆಸ್ ಆಗಿ ಅಬ್ಬರಿಸಲಿದ್ದಾರೆ.

ಸೀತೆ ಎಂದರೆ ಸಾಮಾನ್ಯವಾಗಿ ನಮಗೆ ನೆನಪಿಗೆ ಬರುವುದು ಸಹನೆ, ಮೌನ ಮತ್ತು ತ್ಯಾಗದ ಸಂಕೇತ. ಆದರೆ, ನಮ್ಮ ಭಾರತೀಯ ಪುರಾಣ ಮತ್ತು ಪರಂಪರೆಯಲ್ಲಿ ಸೀತಾದೇವಿಯನ್ನು ನಾನಾ ಅದ್ಭುತ ರೂಪಗಳಲ್ಲಿ ವಿವರಿಸಲಾಗಿದೆ. ವಾಲ್ಮೀಕಿ ರಾಮಾಯಣದಲ್ಲೂ ಸೀತೆ ಬಾಲ್ಯದಲ್ಲೇ ಶಿವಧನಸ್ಸನ್ನು ಸುಲಭವಾಗಿ ಎತ್ತಿದ್ದ ಪ್ರಸಂಗವಿದೆ. ಅಷ್ಟೇ ಅಲ್ಲದೆ, ಅಧ್ಭುತ ರಾಮಾಯಣದಲ್ಲಿ ಸೀತೆಯು ಮಹಾಕಾಳಿಯ ಉಗ್ರ ರೂಪ ತಳೆದು ರಾವಣನ ತಮ್ಮನನ್ನು ಸಂಹರಿಸುತ್ತಾಳೆ. ಪ್ರಸಿದ್ಧ ಲೇಖಕ ಅಮೀಶ್ ತ್ರಿಪಾಠಿ ಅವರ ಕೃತಿಗಳಲ್ಲೂ ಸೀತೆಯನ್ನು ಸಮರಕಲೆ ಬಲ್ಲ ಧೀರ ಯೋಧೆಯಾಗಿಯೇ ಚಿತ್ರಿಸಲಾಗಿದೆ.

ತಮ್ಮ ಈ ಸಾಹಸಮಯ ಪಾತ್ರದ ಬಗ್ಗೆ ನಟಿ ಸಾಯಿ ಪಲ್ಲವಿ ಸ್ವತಃ ಸಂತಸ ಹಂಚಿಕೊಂಡಿದ್ದಾರೆ. ತಮಗೆ ಮೊದಲೇ ನೃತ್ಯದ ಹಿನ್ನೆಲೆ ಇದ್ದ ಕಾರಣ ಕಾಲುಗಳು ಸದೃಢವಾಗಿದ್ದವು ಎಂದು ತಿಳಿಸಿದ್ದಾರೆ. ಆದರೂ ಖಡ್ಗವರಸೆ ಕಲಿಯಲು ಅವರು ವಿಶೇಷವಾದ ಕಠಿಣ ತರಬೇತಿ ಪಡೆದಿದ್ದಾರೆ. ಇವರ ಈ ಸಾಹಸ ದೃಶ್ಯಗಳು ಕೇವಲ ಸಾಹಸದಂತೆ ಕಾಣದೆ, ನೃತ್ಯದ ರೀತಿಯಲ್ಲಿ ಅತ್ಯಂತ ಸೌಂದರ್ಯಯುತವಾಗಿ ಮತ್ತು ಆಕರ್ಷಕವಾಗಿ ಮೂಡಿಬಂದಿವೆ ಎಂದು ಸಿನಿಮಾದ ಮೂಲಗಳು ತಿಳಿಸಿವೆ.

ಸೀತೆಯ ಈ ನವೀನ ಹಾಗೂ ಶಕ್ತಿಶಾಲಿ ಅವತಾರವು ಇಂದಿನ ಯುವ ಪೀಳಿಗೆಗೆ ದೊಡ್ಡ ಮಟ್ಟದ ಸ್ಫೂರ್ತಿ ನೀಡಲಿದೆ. ನಮಿತ್ ಮಲ್ಹೋತ್ರಾ ಅವರ ಈ ‘ರಾಮಾಯಣ’ ಚಿತ್ರವು ಭಾರತೀಯ ಸಿನಿರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಬೆಳ್ಳಿಪರದೆಯಲ್ಲಿ ಸಾಯಿ ಪಲ್ಲವಿಯ ಈ ಸಾಹಸಭರಿತ ಸೀತೆಯ ಅಭಿನಯವನ್ನು ಕಣ್ತುಂಬಿಕೊಳ್ಳಲು ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

Must Read