October 31, 2026
Saturday, October 31, 2026
spot_img

ಶಾರುಖ್-ಅನಿರುದ್ಧ್ ಕಾಂಬಿನೇಷನ್‌ಗೆ ಬ್ರೇಕ್: ‘ಕಿಂಗ್’ ಸಿನಿಮಾಗೆ ಸಚಿನ್-ಜಿಗರ್ ಮ್ಯೂಸಿಕ್ ಧಮಾಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ಬಾದ್‌ಷಾ ಶಾರುಖ್ ಖಾನ್ ಅಭಿನಯದ ಅತ್ಯಂತ ನಿರೀಕ್ಷಿತ ಸಿನಿಮಾ ‘ಕಿಂಗ್’ ನಿಂದ ಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹೊರಬಂದಿದ್ದಾರೆ. ಮದುವೆಯ ಕಾರಣಕ್ಕೆ ಅವರು ಈ ನಿರ್ಧಾರ ತಳೆದಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. ಆದರೆ, ದಕ್ಷಿಣ ಭಾರತದ ಸಾಲು ಸಾಲು ದೊಡ್ಡ ಸಿನಿಮಾಗಳು ಹಾಗೂ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರದ ಬ್ಯುಸಿ ಷೆಡ್ಯೂಲ್‌ನಿಂದಾಗಿ ಸಮಯದ ಅಭಾವ ಎದುರಾಗಿದ್ದೇ ಇದಕ್ಕೆ ಮುಖ್ಯ ಕಾರಣ. ಕೊನೆಯ ಕ್ಷಣದವರೆಗೆ ಚಿತ್ರತಂಡದ ಜೊತೆ ಸುದೀರ್ಘ ಚರ್ಚೆ ನಡೆಸಿ ಅನಿರುದ್ಧ್ ಈ ಹೆಜ್ಜೆ ಇಟ್ಟಿದ್ದು, ಇದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿದೆ.

ಪೂರ್ಣ ಪ್ರಮಾಣದಲ್ಲಿ ಸಂಗೀತ ನೀಡಲು ಸಾಧ್ಯವಾಗದಿದ್ದರೂ, ಅನಿರುದ್ಧ್ ‘ಕಿಂಗ್’ ಚಿತ್ರಕ್ಕಾಗಿ ಒಂದು ಭರ್ಜರಿ ಥೀಮ್ ಟ್ರ್ಯಾಕ್ ಸಂಯೋಜಿಸಿಕೊಟ್ಟಿದ್ದಾರೆ. ಈ ಟ್ರ್ಯಾಕ್‌ನಿಂದ ಸಂಪೂರ್ಣ ತೃಪ್ತನಾಗಿರುವ ಚಿತ್ರತಂಡ, ಅವರ ಮಾಸ್ ಸಂಗೀತದ ಸ್ಪರ್ಶವನ್ನು ಸಿನಿಮಾದಲ್ಲಿ ಹಾಗೆಯೇ ಉಳಿಸಿಕೊಳ್ಳಲು ನಿರ್ಧರಿಸಿದೆ.

ಈಗ ಈ ಬೃಹತ್ ಜವಾಬ್ದಾರಿಯನ್ನು ಬಾಲಿವುಡ್‌ನ ಯಶಸ್ವಿ ಸಂಗೀತ ಜೋಡಿ ಸಚಿನ್-ಜಿಗರ್ ಹೆಗಲಿಗೆ ಏರಿಸಲಾಗಿದೆ. ಅನಿರುದ್ಧ್ ನೀಡಿರುವ ಥೀಮ್ ಟ್ರ್ಯಾಕ್ ಅನ್ನು ಮರುರೂಪಿಸಿ ಹಿನ್ನೆಲೆ ಸಂಗೀತಕ್ಕೆ ಬಳಸಿಕೊಳ್ಳಲಿರುವ ಈ ಜೋಡಿ, ಉಳಿದ ಎಲ್ಲಾ ಹಾಡುಗಳ ಸಂಯೋಜನೆಯನ್ನು ಪೂರ್ಣಗೊಳಿಸಲಿದೆ. ಈ ದೊಡ್ಡ ಯೋಜನೆಯನ್ನು ಕೈಗೆತ್ತಿಕೊಂಡಿರುವ ಸಚಿನ್-ಜಿಗರ್ ಮೇಲೆ ಈಗ ಭಾರೀ ನಿರೀಕ್ಷೆ ಸೃಷ್ಟಿಯಾಗಿದೆ.

ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್ ’ ಅತ್ಯಂತ ದುಬಾರಿ ಬಜೆಟ್‌ನ ಸಿನಿಮಾವಾಗಿದೆ. ಶಾರುಖ್ ಖಾನ್ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಚಾರ ಕಾರ್ಯ ಆರಂಭಿಸಿ, ಮುಂಬರುವ ಕ್ರಿಸ್‌ಮಸ್ ಹಬ್ಬದ ರಜೆಯಲ್ಲಿ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾಗಿ ಶೂಟಿಂಗ್ ತಡವಾಗಬಾರದೆಂಬ ಕಾರಣಕ್ಕೆ ಈ ಶೀಘ್ರ ಬದಲಾವಣೆ ಮಾಡಲಾಗಿದೆ.

Must Read