ಹೊಸದಿಗಂತ ವರದಿ ವಿಜಯಪುರ:
ಗುಮ್ಮಟ ನಗರಿಯಲ್ಲಿ ಶನಿವಾರ ಆರೆಸ್ಸೆಸ್ ನ ಬಾಲ ಸ್ವಯಂ ಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು.
5 ನೇ ತರಗತಿಯಿಂದ 9ನೇ ತರಗತಿವರೆಗೆ ಓದುತ್ತಿರುವ ಬಾಲ ಸ್ವಯಂಸೇವಕರು, ಗಣವೇಷ ಧರಿಸಿ, ಪಥಸಂಚಲನದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ನಗರದ ಮುರಾಣಕೇರಿಯಿಂದ ಆರಂಭವಾದ ಪಥಸಂಚಲನವು ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿಯ ಬಿಡಿಎ ಮೈದಾನದವರೆಗೆ ನಡೆಯಿತು.
ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ನೂರಾರು ಜನರು ಮನೆಗಳ ಮುಂದೆ ರಂಗೋಲಿ ಬಿಡಿಸಿ, ಹೂವುಗಳನ್ನು ಅರ್ಪಿಸುವ ಮೂಲಕ ಬಾಲ ಸ್ವಯಂಸೇವಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಪಥಸಂಚಲನದ ವೇಳೆ ನಗರದ ವಿವಿಧೆಡೆ ಹಬ್ಬದ ವಾತಾವರಣ ಕಂಡುಬಂದಿತು. ವಿಜಯಪುರ ನಗರದಲ್ಲಿ ಇದೇ ಮೊದಲ ಬಾರಿಗೆ ಬಾಲ ಸ್ವಯಂಸೇವಕರ ಪಥಸಂಚಲನ ಆಯೋಜಿಸಲಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ಬಾಲ ಸ್ವಯಂಸೇವಕರ ಶಿಸ್ತುಬದ್ಧ ಹೆಜ್ಜೆ, ಸಂಘಟಿತ ನಡಿಗೆ ಹಾಗೂ ಉತ್ಸಾಹ ಪಥಸಂಚಲನದ ವಿಶೇಷ ಆಕರ್ಷಣೀಯವಾಗಿತ್ತು.



