ಹೊಸದಿಗಂತ ವರದಿ ಬೆಳಗಾವಿ:
ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೂರಾರು ರೈತರು ಚಿಕ್ಕೋಡಿ–ಮಿರಜ್ ಮುಖ್ಯ ರಸ್ತೆಯನ್ನು ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಮಾಂಜರಿ ಗ್ರಾಮದ ಬಳಿ ನಡೆದ ಈ ಹೋರಾಟದಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನ್ಯಾಯಯುತ ಬೆಲೆ ಘೋಷಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟು ಹಿಡಿದರು.
ಬೆಳಗ್ಗೆಯಿಂದಲೇ ರಸ್ತೆಗಿಳಿದ ರೈತರು
ಮಾಂಜರಿ, ಯಡೂರ, ಚಂದೂರ, ಇಂಗಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಮುಂಜಾನೆಯಿಂದಲೇ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಕಬ್ಬಿನ ಬೆಲೆ ನಿಗದಿಯಲ್ಲಿ ರೈತರಿಗೆ ನ್ಯಾಯ ದೊರೆಯುತ್ತಿಲ್ಲ ಎಂದು ಆರೋಪಿಸಿದ ಅವರು, ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಬ್ಬು ಬೆಳೆ ಬೆಳೆಯಲು ತಗಲುತ್ತಿರುವ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ಟನ್‌ಗೆ 5,500 ದರ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಯಾಗಿದೆ. ಬೆಲೆ ಘೋಷಣೆಯಾಗುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.
ಇದನ್ನೂ ಓದಿ:
ರಸ್ತೆಯಲ್ಲೇ ಅಡುಗೆ, ಸಾಮೂಹಿಕ ಊಟ
ಪ್ರತಿಭಟನೆಯ ವಿಶೇಷವಾಗಿ ಗಮನ ಸೆಳೆದಿದ್ದು ರೈತರ ವಿನೂತನ ಕ್ರಮ. ಬೆಳಿಗ್ಗೆಯಿಂದ ಸಂಜೆಯವರೆಗೆ ಧರಣಿ ಮುಂದುವರಿಸಿದ ರೈತರು ಮಧ್ಯಾಹ್ನ ರಸ್ತೆಯಲ್ಲೇ ಅಡುಗೆ ತಯಾರಿಸಿ ಸಾಮೂಹಿಕವಾಗಿ ಊಟ ಮಾಡಿದರು. ತಮ್ಮ ಬೇಡಿಕೆ ಈಡೇರದಿರುವುದಕ್ಕೆ ಸರ್ಕಾರದ ಗಮನ ಸೆಳೆಯಲು ಈ ರೀತಿಯ ಪ್ರತಿಭಟನೆ ನಡೆಸಿರುವುದಾಗಿ ರೈತರು ತಿಳಿಸಿದರು.
ಸಂಚಾರ ಅಸ್ತವ್ಯಸ್ತ, ಪೊಲೀಸ್ ಬಂದೋಬಸ್ತ್
ರೈತರ ರಸ್ತೆ ತಡೆಯಿಂದ ಚಿಕ್ಕೋಡಿ–ಮಿರಜ್ ಮುಖ್ಯ ಮಾರ್ಗದಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪ್ರಯಾಣಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿಡಲು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.



