ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಹಾಗೂ ಅದ್ಧೂರಿ ಕಾವ್ಯವಾಗಿ ಮೂಡಿಬರುತ್ತಿರುವ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದ ಹಿಂದಿರುವ ಬೃಹತ್ ಶ್ರಮದ ಬಗ್ಗೆ ನಿರ್ದೇಶಕ ನಿತೀಶ್ ತಿವಾರಿ ಮನಬಿಚ್ಚಿ ಮಾತನಾಡಿದ್ದಾರೆ. ಈ ಮಹಾಕಾವ್ಯವನ್ನು ತೆರೆಯ ಮೇಲೆ ಅವರ ತಂಡ ಅನುಭವಿಸಿದ ಅಸಾಧಾರಣ ಶ್ರಮ ಹಾಗೂ ಕಠಿಣ ಪರಿಶ್ರಮದ ಕಥೆಯನ್ನು ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾದ ಅತ್ಯಂತ ರೋಮಾಂಚನಕಾರಿ ಹಾಗೂ ಪ್ರಮುಖ ಘಟ್ಟವಾದ ರಾವಣ ಮತ್ತು ಜಟಾಯುವಿನ ನಡುವಿನ ಕಾಳಗವನ್ನು ಜೀವಂತಗೊಳಿಸಲು ತಂಡಕ್ಕೆ ಬರೋಬ್ಬರಿ 6.5 ವರ್ಷಗಳು ಬೇಕಾದವು. ಮೊದಲ ಬಾರಿಗೆ ಕಲಾವಿದರಿಗೆ ವಿಷಯ ವಿವರಿಸಿದ ದಿನದಿಂದ ಹಿಡಿದು, ದೃಶ್ಯದ ಕೊನೆಯ ಹಂತದ ಎಡಿಟಿಂಗ್ ಮುಗಿಯುವವರೆಗೆ ಇಷ್ಟೊಂದು ದೀರ್ಘ ಸಮಯ ತಗೆದುಕೊಂಡಿದೆ. “ಈ ಒಂದೇ ಒಂದು ಸಾಹಸ ಸನ್ನಿವೇಶದ ಹಿಂದಿರುವ ಕಷ್ಟದ ಬಗ್ಗೆ ನಾನು ಗಂಟೆಗಟ್ಟಲೆ ಮಾತನಾಡಬಲ್ಲೆ. ಪ್ರತಿಯೊಂದನ್ನೂ ಶೂನ್ಯದಿಂದ ಆರಂಭಿಸಿ ಸಾವಿರಾರು ಜನರ ಶ್ರಮದಿಂದ ಇದನ್ನು ರೂಪಿಸಿದ್ದೇವೆ” ಎಂದು ನಿತೀಶ್ ತಿವಾರಿ ಹೆಮ್ಮೆಯಿಂದ ಹೇಳಿದ್ದಾರೆ.
ರಾವಣನ ಪೌರಾಣಿಕ ಹಾರುವ ವಾಹನವಾದ ‘ಪುಷ್ಪಕ ವಿಮಾನ’ದ ಅಂತಿಮ ನೋಟಕ್ಕಾಗಿ ತಂಡ ಸುಮಾರು 2 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದೆ. ಕೇವಲ ಕಾಲ್ಪನಿಕವಾಗಿರದೆ, ಅದರ ಹಿಂದೆ ವಿಜ್ಞಾನದ ಸ್ಪರ್ಶವೂ ಇರಬೇಕು ಎಂಬುದು ತಂಡದ ಆಶಯವಾಗಿತ್ತು. ಇದಕ್ಕಾಗಿ ಸುಮಾರು 40 ರಿಂದ 50 ವಿಭಿನ್ನ ವಿನ್ಯಾಸಗಳನ್ನು ಸಿದ್ಧಪಡಿಸಿ, ಕೊನೆಗೆ ಅತ್ಯುತ್ತಮವಾದ ಒಂದನ್ನು ಆಯ್ಕೆ ಮಾಡಲಾಯಿತು.
ಆರಂಭದಲ್ಲಿ ಅಂದುಕೊಂಡಿದ್ದ ಪುಷ್ಪಕ ವಿಮಾನದ ಮಾದರಿಯನ್ನೇ ಆಧಾರವಾಗಿಟ್ಟುಕೊಂಡು ರಾವಣ-ಜಟಾಯು ಕಾಳಗವನ್ನು ಚಿತ್ರೀಕರಿಸಲಾಗಿತ್ತು. ಆದರೆ, ಅಂತಿಮವಾಗಿ ಆಯ್ಕೆಯಾದ ಹೊಸ ವಿಮಾನದ ಡಿಸೈನ್ ಸಂಪೂರ್ಣ ವಿಭಿನ್ನವಾಗಿದ್ದರಿಂದ, ಇಡೀ ಸಾಹಸ ದೃಶ್ಯವನ್ನು ಮತ್ತೆ ಬದಲಾಯಿಸಿ ಮರುನಿರ್ಮಾಣ ಮಾಡಬೇಕಾಯಿತು. ಇದೇ ಕಾರಣಕ್ಕೆ ಈ ದೃಶ್ಯ ಮುಗಿಯಲು ಇಷ್ಟೊಂದು ವಿಳಂಬವಾಯಿತು ಎಂದು ನಿತೀಶ್ ತಿವಾರಿ ಹೇಳಿದ್ದಾರೆ.
ಈ ರೋಮಾಂಚನಕಾರಿ ದೃಶ್ಯಗಳು ಭಾರತೀಯ ಸಿನಿಪ್ರಿಯರಿಗೆ ಬೆಳ್ಳಿಪರದೆಯ ಮೇಲೆ ಕಣ್ಣು ಕೋರೈಸುವಂತಹ ಹೊಸ ಅನುಭವ ನೀಡಲಿವೆ.



