ಹೊಸದಿಗಂತ ಡಿಜಿಟಲ್ ಡೆಸ್ಕ್:
ಹ್ಯಾಮಿಲ್ಟನ್ನ ಸೇಡನ್ ಪಾರ್ಕ್ ಮೈದಾನದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಕಿವೀಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಆರಂಭಿಕ ಆಘಾತದ ಹೊರತಾಗಿಯೂ ಮಧ್ಯಮ ಕ್ರಮದ ಸ್ಫೋಟಕ ಬ್ಯಾಟಿಂಗ್ ಹಾಗೂ ಡೆತ್ ಓವರ್ಗಳ ಉತ್ತಮ ಆಟದ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಕಲೆಹಾಕಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಕಿವೀಸ್ ವೇಗಿಗಳ ಮಾರಕ ದಾಳಿಗೆ ನಲುಗಿದ ಟೀಮ್ ಇಂಡಿಯಾ ಆರಂಭದಲ್ಲೇ ಮುಖಭಂಗ ಅನುಭವಿಸಿತು. ಕೇವಲ 1 ರನ್ ಗಳಿಸಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಾಗೂ 4 ರನ್ ಗಳಿಸಿದ್ದ ಸಂಜು ಸ್ಯಾಮ್ಸನ್ ಬೇಗನೆ ಪೆವಿಲಿಯನ್ ಸೇರಿಕೊಂಡರು. ಇದರಿಂದ ಭಾರತ ತಂಡ ಆರಂಭಿಕ ಹಂತದಲ್ಲಿ ಒತ್ತಡಕ್ಕೆ ಸಿಲುಕಿತು.
ಆರಂಭಿಕ ವಿಕೆಟ್ಗಳು ಪತನಗೊಂಡ ಬಳಿಕ ಕ್ರೀಸ್ಗೆ ಬಂದ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಕಿವೀಸ್ ಬೌಲರ್ಗಳ ಮೇಲೆ ಸವಾರಿ ಮಾಡಿತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಈ ಜೋಡಿ ಕೆಲವೇ ಓವರ್ಗಳಲ್ಲಿ ಮೈದಾನದ ಮೂಲೆಮೂಲೆಗೂ ಚೆಂಡನ್ನು ಅಟ್ಟಿತು. ಈ ಸ್ಫೋಟಕ ಜೋಡಿಯು ನಾಲ್ಕನೇ ವಿಕೆಟ್ಗೆ ಬರೋಬ್ಬರಿ 97 ರನ್ಗಳ ಅಮೂಲ್ಯ ಜೊತೆಯಾಟವಾಡಿ ತಂಡವನ್ನು ಅಪಾಯದಿಂದ ಪಾರು ಮಾಡಿತು.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶನ್ ಕೇವಲ 32 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್ ಹಾಗೂ ಅಷ್ಟೇ ಬೌಂಡರಿಗಳೊಂದಿಗೆ 61 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಮತ್ತೊಂದೆಡೆ ಅಬ್ಬರಿಸಿದ ಶ್ರೇಯಸ್ ಅಯ್ಯರ್ ಕೇವಲ 23 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ಗಳ ನೆರವಿನಿಂದ ಮಿಂಚಿನ 50 ರನ್ ಪೂರೈಸಿದರು. ಪರಿಣಾಮವಾಗಿ ಕೇವಲ 11 ಓವರ್ಗಳ ಮುಕ್ತಾಯಕ್ಕೆ ಭಾರತದ ಸ್ಕೋರ್ 120ರ ಗಡಿ ದಾಟಿತು.
ಇಶಾನ್ ಮತ್ತು ಶ್ರೇಯಸ್ ವಿಕೆಟ್ ಪತನದ ಬಳಿಕ ನ್ಯೂಜಿಲೆಂಡ್ ಬೌಲರ್ಗಳು ಕೊಂಚ ಹಿಡಿತ ಸಾಧಿಸಿದರೂ, ಅಂತಿಮ ಹಂತದಲ್ಲಿ ನಮನ್ ಧೀರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಡೆತ್ ಓವರ್ಗಳಲ್ಲಿ ನಮನ್ ಧೀರ್ 33 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 22 ರನ್ಗಳನ್ನು ಕಲೆ ಹಾಕಿದರು. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ಗೆ 191 ರನ್ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.



