ಹೊಸದಿಗಂತ ಡಿಜಿಟಲ್ ಡೆಸ್ಕ್:
2024ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮತ್ತು ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಮೂಲಕ ಮತಗಳ್ಳತನ ನಡೆದಿದೆ ಎಂದು ಆರೋಪಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜ್ಞಾನೇಶ್ ಕುಮಾರ್ ಅವರನ್ನು ಸಿಇಸಿ ಹುದ್ದೆಯಿಂದ ತೆಗೆದುಹಾಕಲಾಗುತ್ತದೆ, ಕೊನೆಗೆ ಅವರು ಜೈಲಿಗೂ ಹೋಗುತ್ತಾರೆ ಎಂದು ಹೇಳಿದ್ದಾರೆ.
ಭಾನುವಾರ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, 2024ರ ಚುನಾವಣೆಯನ್ನು ಅಕ್ರಮ ಎಂದು ಕರೆದರು. ಇವಿಎಂ ಮತ್ತು ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆಸಿ ಮತಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದರು.
ಮತಗಳ್ಳತನ ದೇಶದ ಪ್ರತಿಯೊಂದು ಧ್ವನಿಯ ಕಳವು
ಇದು ಸಾಮಾನ್ಯ ಕಳವಲ್ಲ. ಭಾರತದ ಪ್ರತಿಯೊಬ್ಬರ ಧ್ವನಿಯನ್ನು ಕದಿಯುವುದಾಗಿದೆ. ಇದನ್ನು ದೇಶದ್ರೋಹ ಎಂದು ಕರೆಯಲಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ಚುನಾವಣಾ ಆಯೋಗದ ದತ್ತಾಂಶವೇ ತಮ್ಮ ಆರೋಪಗಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, 2024ರ ಚುನಾವಣೆಯ ಬಳಿಕ ಶೇ.15ರಷ್ಟು ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಪ್ರತಿಪಾದಿಸಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗೆ ಕರೆ
ಆರ್‌ಎಸ್‌ಎಸ್ ದೇಶದ ಶಿಕ್ಷಣ ವ್ಯವಸ್ಥೆಯಿಂದ ತನಿಖಾ ಸಂಸ್ಥೆಗಳವರೆಗೆ ವಿವಿಧ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಇದರಿಂದ ರೈತರು, ಕಾರ್ಮಿಕರು ಮತ್ತು ಯುವಜನರಿಗೆ ಹಕ್ಕುಗಳು ದೊರೆಯುತ್ತಿಲ್ಲ ಎಂದರು. ಹಣ ಎಷ್ಟೇ ಇದ್ದರೂ ಸಂವಿಧಾನಕ್ಕಿಂತ ದೊಡ್ಡವರಲ್ಲ. ಸಂವಿಧಾನವೇ ಎಲ್ಲಕ್ಕಿಂತ ದೊಡ್ಡದು ಎಂದು ಹೇಳಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದಾಗಿ ಘೋಷಿಸಿದರು.
ಇದನ್ನೂ ಓದಿ:
ಖರ್ಗೆ ವಾಗ್ದಾಳಿ; ಬಿಜೆಪಿ ತಿರುಗೇಟು
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಬಿಜೆಪಿ ಆಡಳಿತದ ಹಲವು ಸರ್ಕಾರಗಳು ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿವೆ ಎಂದು ಆರೋಪಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹೇಳಿದರು.
ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ನಂಬಿಕೆ ಕಳೆದುಕೊಂಡಿದೆ ಎಂದು ಟೀಕಿಸಿದ್ದಾರೆ. ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಂವಿಧಾನಬದ್ಧ ಪ್ರಕ್ರಿಯೆ ಎಂದು ಸಮರ್ಥಿಸಿಕೊಂಡಿದ್ದಾರೆ.



