November 1, 2026
Sunday, November 1, 2026
spot_img

ಗೋಕರ್ಣ ಕಡಲತೀರದಲ್ಲಿ ಭೀಕರ ದುರಂತ: ಅಲೆಗಳಿಗೆ ಸಿಲುಕಿ ಮೂವರು ಪ್ರವಾಸಿಗರು ಸಮುದ್ರಪಾಲು

ಹೊಸದಿಗಂತ ವರದಿ ಗೋಕರ್ಣ:

ಸಮುದ್ರದ ಅಲೆಗಳ ಹೊಡೆತಕ್ಕೆ ನೀರಿನಲ್ಲಿ ಕೊಚ್ಚಿಹೋಗಿ ಮೂವರು ಪ್ರವಾಸಿಗರು ನೀರುಪಾಲಾದ ಘಟನೆ ದುಬ್ಬನಸಸಿ ಕಡಲತೀರದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

ಜಾರ್ಖಂಡ್ ಮೂಲದ ಶೋಭಾ ದಾಸ್ (22), ಬೆಂಗಳೂರಿನ ಮಹಮ್ಮದ ಅಕ್ರಂ (27) ಮತ್ತು ವಿಶ್ವೇಶ್ (24) ನೀರುಪಾಲಾದವರು.

ಈ ಪೈಕಿ ಸಮುದ್ರದಲ್ಲಿ ಕೊಚ್ಚಿ ಹೋಗಿರುವ ವಿಶ್ವೇಶ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ಕು ಜನರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪನಿಯೊಂದರ 16 ಜನ ಉದ್ಯೋಗಿಗಳ ತಂಡ ಗೋಕರ್ಣ ಪ್ರವಾಸಕ್ಕೆ ಬಂದು ದುಬ್ಬನಸಸಿ ಕಡಲ ತೀರದ ರೆಸಾರ್ಟಿನಲ್ಲಿ ವಾಸ್ತವ್ಯ ಮಾಡಿದ್ದರು ಎನ್ನಲಾಗುತ್ತಿದ್ದು ಬೆಳಗಿನ ಜಾವ ಸಮುದ್ರದ ನೀರಿಗೆ ಇಳಿದು ಆಟವಾಡುತ್ತಿರುವ ಸಮಯದಲ್ಲಿ ಭಾರೀ ಅಲೆಗಳ ಹೊಡೆತದಿಂದ ಸಮುದ್ರದಲ್ಲಿ ಕೊಚ್ಚಿ ಹೋಗಿ ದುರ್ಘಟನೆ ಸಂಭವಿಸಿದೆ.

ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಣ್ಮರೆಯಾದ ವ್ಯಕ್ತಿಯ ಶೋಧ ಕಾರ್ಯ ಮುಂದುವರಿಸಿದ್ದಾರೆ.

Must Read

Skip to toolbar