ಏನೇನ್ ಬೇಕು?
ರವೆ
ಪಾಲಕ್ ಸೊಪ್ಪು
ಈರುಳ್ಳಿ
ಹಸಿಮೆಣಸಿನಕಾಯಿ
ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್
ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು, ಎಣ್ಣೆ
ಉಪ್ಪು
ಮಾಡೋದು ಹೇಗೆ ನೋಡಿಕೊಳ್ಳಿ
ಮೊದಲು ಒಂದು ಬಾಣಲೆಯಲ್ಲಿ ರವೆಯನ್ನು ಸಣ್ಣ ಉರಿಯಲ್ಲಿ ಸುವಾಸನೆ ಬರುವವರೆಗೆ ಹುರಿದು ಪಕ್ಕಕ್ಕೆ ತೆಗೆದಿಟ್ಟುಕೊಳ್ಳಿ. ಕೆಲವರು ಪಾಲಕ್ ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಪ್ಯೂರಿ ಮಾಡಿಕೊಳ್ಳುತ್ತಾರೆ, ಇನ್ನು ಕೆಲವರು ಸಣ್ಣಗೆ ಹೆಚ್ಚಿ ನೇರವಾಗಿ ಬಳಸುತ್ತಾರೆ. ಸಣ್ಣಗೆ ಹೆಚ್ಚಿ ಬಳಸುವುದು ಹೆಚ್ಚು ರುಚಿ ನೀಡುತ್ತದೆ. ಈಗ ಅದೇ ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿವಾಸನೆ ಹೋಗುವವರೆಗೆ ಬಾಡಿಸಿ. ನಂತರ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪನ್ನು ಹಾಕಿ ಅದು ಎಣ್ಣೆಯಲ್ಲಿ ಮೆತ್ತಗಾಗುವವರೆಗೆ 2 ನಿಮಿಷ ಬಾಡಿಸಿ. 1 ಕಪ್ ರವೆಗೆ ಅಂದಾಜು 2.5 ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನೀರನ್ನು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿದ್ದಂತೆ ಉರಿಯನ್ನು ಸಣ್ಣ ಮಾಡಿ, ಹುರಿದಿಟ್ಟ ರವೆಯನ್ನು ಸ್ವಲ್ಪ-ಸ್ವಲ್ಪವಾಗಿ ಹಾಕುತ್ತಾ ಗಂಟು ಬಾರದಂತೆ ಕೈಯಾಡಿಸಿ. ಮುಚ್ಚಳ ಮುಚ್ಚಿ 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ, ಘಮಘಮಿಸುವ ಪಾಲಕ್ ಉಪ್ಪಿಟ್ಟು ಸವಿಯಲು ಸಿದ್ಧ!
ಇದನ್ನ ತಿಂದ್ರೆ ಏನ್ ಲಾಭ?
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಇರುವುದರಿಂದ, ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ ಸುಸ್ತು ಹಾಗೂ ರಕ್ತಹೀನತೆಯನ್ನು ದೂರ ಮಾಡುತ್ತದೆ.
ಇದರಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ‘ಎ’ ದೃಷ್ಟಿಯನ್ನು ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ.
ನಾರಿನಂಶ ಸಮೃದ್ಧವಾಗಿರುವ ಕಾರಣ ಮಲಬದ್ಧತೆ ಸಮಸ್ಯೆಯನ್ನು ತಡೆಗಟ್ಟಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡುತ್ತದೆ.
ಕ್ಯಾಲೋರಿಗಳು ಕಡಿಮೆ ಇರುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಇದು ಬೆಳಗಿನ ಅತ್ಯುತ್ತಮ ಉಪಹಾರವಾಗಿದೆ.



