ಇತ್ತೀಚಿನ ದಿನಗಳಲ್ಲಿ ಒತ್ತಡ ನಿವಾರಣೆಗೆ ಹಾಗು ಮನಸ್ಸನ್ನು ಉಲ್ಲಾಸಗೊಳಿಸಲು ಹಾಗೂ ದೇಹ ಬೆಚ್ಚಗಿಡಲು ಬಹುಪಾಲು ಜನ ಚಹಾ ಅಥವಾ ಕಾಫಿ ಮೊರೆಹೋಗುವುದು ಸಾಮಾನ್ಯ. ಚಹಾ ಹಾಗು ಕಾಫಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದರೆ ದೇಹ ಪ್ರಕೃತಿಗೆ ಅನುಗುಣವಾಗಿ ಕೆಲವು ಆಯುರ್ವೇದ ಟೀ/ ಕಷಾಯ ರೆಸಿಪಿಗಳು ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಹಾಗೂ ಆರೋಗ್ಯವಾಗಿಡಲು ಸಹಕಾರಿಯಾಗಿದೆ. ಪದೇ ಪದೇ ಚಹಾ, ಕಾಫಿ ಸೇವಿಸುವುದಕ್ಕಿಂತ ಈ ಕಷಾಯಗಳು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮವಾಗಿವೆ. ಯಾವ ಟೀಗಳನ್ನು ಯಾವ ಸಮಯದಲ್ಲಿ ಕುಡಿಯುವುದು ಸೂಕ್ತ? ಈ ಬಗ್ಗೆ ಡಾ.ಸುಹಾಸ್ ಎಚ್.ಡಿ. ಮಾಹಿತಿ ನೀಡಿದ್ದಾರೆ ನೋಡಿ..
ಶಂಖಪುಷ್ಪಿ ಟೀ

ಬೇಕಾಗುವ ಪದಾರ್ಥಗಳು
ಶಂಖಪುಷ್ಪಿ ಹೂ-ಎರಡರಿಂದ ಮೂರು ಹಸಿ ಅಥವಾ ಒಣಗಿದ್ದು, ಬೆಲ್ಲ, ನಿಂಬೆ ರಸ
ವಿಧಾನ- ಶಂಖಪುಷ್ಪಿಯನ್ನು ಒಂದು ಲೋಟ ನೀರಿಗೆ ಹಾಕಿ ಬಣ್ಣ ಬರುವರೆಗೆ ಕುದಿಸುವುದು ಇದಕ್ಕೆ ಬೇಕಾದಲ್ಲಿ ಬೆಲ್ಲ ಸೇರಿಸಬಹುದು ಸೋಸಿದ ನಂತರ ಸ್ವಲ್ಪ ನಿಂಬೆ ರಸ ಸೇರಿಸಿ ಬಿಸಿ ಬಿಸಿ ಕುಡಿಯುವುದು
ಶಂಖಪುಷ್ಪಿ ಟೀ ಮೂರು ದೋಷಗಳನ್ನು ಶಮನ ಮಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಇದನ್ನು ಯಾರು ಬೇಕಾದರೂ ಸೇವಿಸಬಹುದು
ಸುಗಂಧಿ ಬೇರಿನ ಟೀ

ಬೇಕಾಗುವ ಪದಾರ್ಥಗಳು:
ಸುಗಂಧಿ ಬೇರಿನ ಪುಡಿ, ಜೀರಿಗೆ, ಹಾಲು, ಬೆಲ್ಲ ಅಥವಾ ಸಕ್ಕರೆ
ವಿಧಾನ- ಸುಗಂಧಿ ಬೇರಿನ ಪುಡಿ ಹಾಗು ಜೀರಿಗೆಯನ್ನು (ಎರಡು ಸೇರಿ ಒಂದು ಚಮಚದಷ್ಟು) ಒಂದು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸುವುದು ನಂತರ ಇದಕ್ಕೆ ಹಾಲನ್ನು ಸೇರಿಸಿ ಬೇಕಾದಲ್ಲಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಸೇವಿಸುವುದು.
ಉಪಯೋಗ: ಇದು ಶರೀರದ ಉಷ್ಣಾಂಶವನ್ನು ಶಮನ ಮಾಡಿ ಸುಸ್ತು ಹಾಗು ಬಾಯಾರಿಕೆಯನ್ನು ಶಮನ ಮಾಡುತ್ತದೆ ಪಿತ್ತ ಹಾಗು ವಾತ ಪ್ರಕೃತಿಯವರಿಗೆ ಇದು ಅತ್ಯಂತ ಸಹಕಾರಿ.
ಪುದೀನ ಟೀ

ಬೇಕಾಗುವ ಪದಾರ್ಥಗಳು:
ಪುದಿನ ಎಲೆಗಳು, ಹಸಿ ಶುಂಠಿ, ಜೀರಿಗೆ, ಸಕ್ಕರೆ ಅಥವಾ ಬೆಲ್ಲ
ವಿಧಾನ: ಪುದಿನ ಎಲೆಗಳನ್ನು(ಎಂಟರಿಂದ ಹತ್ತು) ಹಾಗು ಹಸಿ ಶುಂಠಿಯನ್ನು ಜೀರಿಗೆಯನ್ನು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸುವುದು, ನಂತರ ಇದನ್ನ ಸೋಸಿ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಬಹುದು ಫ್ಲೇವರ್ಗಾಗಿ ನಿಂಬೆ ರಸವನ್ನು ಏಲಕ್ಕಿಪುಡಿಯನ್ನೂ ಸೇರಿಸಬಹುದು
ಪುದೀನ ಟೀ- ಶೀತ, ತಲೆಭಾರ ಹಾಗು ಗಂಟಲಿನ ಕಿರಿಕಿರಿಯನ್ನು ಶಮನ ಮಾಡುತ್ತದೆ. ಪಿತ್ತ ಪ್ರಕೃತಿಯವರಿಗೆ, ಉಷ್ಣ ಶರೀರದವರಿಗೆ ಈ ಟೀ ಅಷ್ಟು ಹಿತವಲ್ಲ.
ತುಳಸೀ ಟೀ

ಬೇಕಾಗುವ ಪದಾರ್ಥಗಳು- ತುಳಸಿ ಎಲೆಗಳು, ಮಜ್ಜಿಗೆ ಹುಲ್ಲು, ನಿಂಬೆ ರಸ ಬೆಲ್ಲ ಅಥವಾ ಸಕ್ಕರೆ
ವಿಧಾನ- 3-4 ತುಳಸಿ ಎಲೆಗಳನ್ನು ಹಾಗು ಒಂದು ಎಳೆ ಮಜ್ಜಿಗೆ ಹುಲ್ಲನ್ನು ಜಜ್ಜಿ ಒಂದು ಲೋಟ ನೀರು ಸೇರಿಸಿ ಕುದಿಸುವುದು, ನಂತರ ಅದನ್ನು ಸೋಸಿ ನಿಂಬೆ ರಸವನ್ನು ಸೇರಿಸಿ ಬೇಕಾದಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಸೇವಿಸುವುದು
ಉಪಯೋಗ- ಕೆಮ್ಮು ಜ್ವರ ನಿವಾರಕ, ವಾತದೋಷಕ್ಕೆ ಹಿತಕಾರಿ
ವಿಶೇಷ ಸೂಚನೆ – ಯಾವುದೇ ಕಷಾಯವನ್ನು / ಟೀ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ ಅಭ್ಯಾಸ ಅಲ್ಲ, ಬಿಸಿ ಟೀ ಗೆ ಜೇನುತುಪ್ಪ ಹಾಕಿ ಸೇವಿಸಿದರೆ ವಿಷಕಾರಿಯಾಗಿ ಪರಿಣಮಿಸುತ್ತದೆ. ನಿಂಬೆರಸ ಅಥವಾ ಹುಳಿ ಪದಾರ್ಥ ಹೊಂದಿರುವ ಟೀ ಗೆ ಹಾಲು ಸೇರಿಸುವುದು ಅಪಾಯಕಾರಿ.
- ಡಾ॥ ಸುಹಾಸ್ ಹೆಚ್. ಡಿ
ಮುಖ್ಯ ವೈದ್ಯಾಧಿಕಾರಿ
ಶ್ರೀ ಶಾರದಾ ಧನ್ವಂತರಿ ಆಯುರ್ವೇದ ಆಸ್ಪತ್ರೆ, ಶೃಂಗೇರಿ



