ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಕ್ರಿಕೆಟ್ನ ಆಧುನಿಕ ದಂತಕಥೆ ವಿರಾಟ್ ಕೊಹ್ಲಿ, ನವೆಂಬರ್ 4 ರಿಂದ ಆರಂಭವಾಗಲಿರುವ ನ್ಯೂಝಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಐತಿಹಾಸಿಕ ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಳ್ಳಲು ಸಜ್ಜಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಫಾರ್ಮ್ಗೆ ಮರಳಿರುವ ‘ಕಿಂಗ್ ಕೊಹ್ಲಿ’, ಕಿವೀಸ್ ಅಂಗಳದಲ್ಲೂ ರನ್ ಬೇಟೆ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಆಟಗಾರ ವಿರಾಟ್ ಕೊಹ್ಲಿ. ಪ್ರಸ್ತುತ ಈ ಸ್ಥಾನದಲ್ಲಿ 12,988 ರನ್ ಗಳಿಸಿರುವ ವಿರಾಟ್, ಇನ್ನು ಕೇವಲ 2 ರನ್ ಗಳಿಸಿದರೆ ಸಾಕು. ಏಕದಿನ ಇತಿಹಾಸದಲ್ಲೇ 3ನೇ ಸ್ಥಾನದಲ್ಲಿ ಬ್ಯಾಟ್ ಬೀಸಿ 13,000 ರನ್ ಪೂರೈಸಿದ ಜಗತ್ತಿನ ಪ್ರಥಮ ಬ್ಯಾಟರ್ ಎಂಬ ಅನನ್ಯ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿಗಳು ಸೇರಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಕೊಹ್ಲಿ ಪ್ರಸ್ತುತ 3ನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ (28,016 ರನ್) ಅವರ ದಾಖಲೆ ಮುರಿಯಲು ವಿರಾಟ್ಗೆ ಇನ್ನು ಕೇವಲ 42 ರನ್ ಬೇಕಿದೆ. ಈ ರನ್ ಗಳಿಸುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಅವರ ನಂತರ ವಿಶ್ವದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್ ಗಳಿಸಿದ 2ನೇ ಆಟಗಾರ ಎಂಬ ಹೆಗ್ಗಳಿಕೆ ಕೊಹ್ಲಿ ವಶವಾಗಲಿದೆ.
ಪ್ರಸ್ತುತ 27,975 ರನ್ ಗಳಿಸಿರುವ ಕೊಹ್ಲಿ, ಇನ್ನು ಕೇವಲ 25 ರನ್ ಗಳಿಸಿದರೆ 28,000 ರನ್ಗಳ ಬೃಹತ್ ಮೈಲಿಗಲ್ಲು ತಲುಪಲಿದ್ದಾರೆ. ಈ ಮೂಲಕ ಜಗತ್ತಿನಲ್ಲೇ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 28 ಸಾವಿರ ರನ್ ಪೂರೈಸಿದ ಮಾಸ್ಟರ್ ಬ್ಯಾಟರ್ ಎಂಬ ಹೊಸ ವಿಶ್ವ ದಾಖಲೆ ಬರೆಯಲಿದ್ದಾರೆ.
ವಿದೇಶಿ ನೆಲದಲ್ಲಿ ಸ್ಥಿರ ಪ್ರದರ್ಶನ ನೀಡುವ ಕೊಹ್ಲಿ ಈಗಾಗಲೇ 49 ಬಾರಿ 50 ಕ್ಕಿಂತ ಹೆಚ್ಚು ರನ್ಗಳ ಇನಿಂಗ್ಸ್ ಆಡಿದ್ದಾರೆ. ಈ ಸರಣಿಯಲ್ಲಿ ಇನ್ನೊಂದು ಅರ್ಧಶತಕ ಅಥವಾ ಶತಕ ಬಾರಿಸಿದರೆ, ವಿದೇಶದಲ್ಲಿ 50 ಬಾರಿ ’50+ ರನ್’ ಗಳಿಸಿದ ಪ್ರಪಂಚದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ನ್ಯೂಝಿಲೆಂಡ್ ದೇಶಗಳಲ್ಲಿ ಕೊಹ್ಲಿ ಬ್ಯಾಟಿಂಗ್ ಸರಾಸರಿ ಅದ್ಭುತವಾಗಿದೆ. ನ್ಯೂಝಿಲೆಂಡ್ ನೆಲದಲ್ಲಿ 13 ಇನಿಂಗ್ಸ್ಗಳಿಂದ 49.66 ಸರಾಸರಿಯಲ್ಲಿ 596 ರನ್ ಗಳಿಸಿರುವ ಕೊಹ್ಲಿ, ಇನ್ನು ಕೇವಲ 4 ರನ್ ಗಳಿಸಿದರೆ ಕಿವೀಸ್ ನೆಲದಲ್ಲಿ 600 ರನ್ ಪೂರ್ಣಗೊಳ್ಳಲಿದೆ. ಇದರೊಂದಿಗೆ ನಾಲ್ಕೂ SENA ರಾಷ್ಟ್ರಗಳಲ್ಲಿ 50ಕ್ಕಿಂತ ಹೆಚ್ಚು ಸರಾಸರಿ ಕಾಯ್ದುಕೊಂಡ ಏಕೈಕ ಬ್ಯಾಟರ್ ಎಂಬ ವಿಶ್ವ ದಾಖಲೆ ಕೊಹ್ಲಿ ಪಾಲಾಗಲಿದೆ.
ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿರುವ ‘ಕಿಂಗ್ ಕೊಹ್ಲಿ’ ಕಡೆಯಿಂದ ನ್ಯೂಝಿಲೆಂಡ್ ಸರಣಿಯಲ್ಲಿ ಭರ್ಜರಿ ರನ್ ಅಬ್ಬರವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಉತ್ಸುಕರಾಗಿದ್ದಾರೆ.



