ಹೊಸದಿಗಂತ ವರದಿ ಮಡಿಕೇರಿ:
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ದಿವಾಳಿಯಾಗಿದ್ದು, ಬಿಟ್ಟಿ ಭಾಗ್ಯದ ಮೂಲಕ ಕೆಲವು ತಿಂಗಳು ನೀಡಿದ ಹಣವನ್ನು ಬೆಲೆ ಏರಿಕೆಯ ಮೂಲಕ ಜನತೆಯಿಂದ ವಾಪಾಸ್ ಪಡೆದುಕೊಳ್ಳುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಲು, ಮೊಸರು ಬೆಲೆ ಏರಿಕೆಯ ಜೊತೆಗೆ ಇದೀಗ ಬಸ್ ಪ್ರಯಾಣ ದರವನ್ನು ದುಪಟ್ಟು ಏರಿಸುವ ಮೂಲಕ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರ ಜೇಬಿಗೆ ಕತ್ತರಿ ಹಾಕಿದೆ ಎಂದು ಆರೋಪಿಸಿದ್ದಾರೆ.
ಬಿಟ್ಟಿ ಭಾಗ್ಯದ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಆರಂಭದ ಕೆಲ ತಿಂಗಳು ಬಿಟ್ಟಿ ಭಾಗ್ಯವನ್ನು ನೀಡಿ ಅಂದು ಕೊಟ್ಟ ಬಿಟ್ಟಿ ಭಾಗ್ಯದ ಹಣವನ್ನು ಬೆಲೆ ಏರಿಕೆ ಮೂಲಕ ಇಂದು ಜನತೆಯಿಂದ ವಾಪಾಸ್ ಪಡೆದುಕೊಳ್ಳುತ್ತಿದೆ ಎಂಬುದನ್ನು ಜನ ಸಾಮಾನ್ಯರು ಅರ್ಥ ಮಾಡಿ ಕೊಳ್ಳಬೇಕೆಂದು ಮಹೇಶ್ ಜೈನಿ ಕರೆ ನೀಡಿದ್ದಾರೆ. ನಾಚಿಕೆ ಇಲ್ಲದ ಈ ಸರ್ಕಾರ ತನ್ನ ಅವಧಿಯನ್ನು ಪೂರೈಸುವುದರ ಒಳಗೆ ಇನ್ನಷ್ಟು ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಮತ್ತಷ್ಟು ತೊಂದರೆ ಕೊಡಲಿದೆ ಎಂದು ಭವಿಷ್ಯ ನುಡಿದಿರುವ ಅವರು, ಆಡಳಿತರೂಢ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆಯ ಮೂಲಕ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೀಪಾವಳಿಯ ಕೊಡುಗೆ ನೀಡಿದ್ದು, ಜನ ಸಾಮಾನ್ಯರ ಪರವಾಗಿ ಬಿಜೆಪಿ ಉಗ್ರ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದೂ ಮಹೇಶ್ ಜೈನಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.



