November 4, 2026
Wednesday, November 4, 2026
spot_img

ನಾಳೆ ಬಿಗ್ ಸ್ಕ್ರೀನ್‌ಗೆ ‘ರಾಮಾಯಣ’ ಎಂಟ್ರಿ: 18 ತಿಂಗಳ ಕಠಿಣ ತಪಸ್ಸಿನ ಕಥೆ ಬಿಚ್ಚಿಟ್ಟ ರಣಬೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ನಾಳೆ ನವೆಂಬರ್ 5ರ ಗುರುವಾರ ಪ್ರಪಂಚದಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಅಕ್ಟೋಬರ್ 27 ರಂದು ಲಾಸ್ ಎಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿ ಈ ಸಿನಿಮಾದ ಮೊದಲ ಪ್ರದರ್ಶನ ಯಶಸ್ವಿಯಾಗಿ ನೆರವೇರಿತ್ತು.

ಇತ್ತೀಚೆಗೆ ‘ರಿವ್ಯೂ ನೇಷನ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಣಬೀರ್ ಕಪೂರ್, ಶ್ರೀರಾಮನ ಪಾತ್ರಕ್ಕಾಗಿ ತಾವು ಮಾಡಿಕೊಂಡ ಸಿದ್ಧತೆಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಆರಂಭವಾಗುವುದಕ್ಕೂ ಒಂದೂವರೆ ವರ್ಷ ಮುಂಚಿತವಾಗಿಯೇ ತರಬೇತಿ ಶುರು ಮಾಡಿದ್ದಾಗಿ ತಿಳಿಸಿದ್ದಾರೆ. ಶ್ರೀರಾಮ ಒಬ್ಬ ಶ್ರೇಷ್ಠ ಧನುರ್ಧಾರಿ, ಹೀಗಾಗಿ ಬಿಲ್ಲು-ಬಾಣ ಹಿಡಿಯುವ ಸರಿಯಾದ ತಂತ್ರಗಳನ್ನು ಕಲಿಯಲು ಭಾರತದ ಒಲಿಂಪಿಯನ್ ಕ್ರೀಡಾಪಟುವೊಬ್ಬರಿಂದ ವಿಶೇಷ ತರಬೇತಿ ಪಡೆದಿದ್ದಾರೆ. ಜೊತೆಗೆ ನ್ಯೂಯಾರ್ಕ್‌ನಲ್ಲೂ ಕೆಲವು ತರಗತಿಗಳಿಗೆ ಹಾಜರಾಗಿದ್ದರು.

‘ಪ್ಲಾನೆಟ್ ಆಫ್ ದಿ ಏಪ್ಸ್’ ಮತ್ತು ‘ಸೂಪರ್‌ಮ್ಯಾನ್ ರಿಟರ್ನ್ಸ್’ ನಂತಹ ದೈತ್ಯ ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಖ್ಯಾತ ಸಾಹಸ ನಿರ್ದೇಶಕ ಟೆರ್ರಿ ನೋಟರಿ ಅವರಿಂದ ರಣಬೀರ್ ಮತ್ತು ತಂಡ ವಿಶೇಷ ತರಬೇತಿ ಪಡೆದಿದೆ. ಇದು ಕೇವಲ ಸೈನ್ಯ ಅಥವಾ ಯುದ್ಧದ ತರಬೇತಿಯಾಗಿರಲಿಲ್ಲ. ಬದಲಿಗೆ ದೇಹದ ಭಂಗಿ, ನಡೆಯುವ ರೀತಿ, ಉಸಿರಾಟದ ತಂತ್ರಗಳು ಹಾಗೂ ಮರ ಹತ್ತುವಂತಹ ಸಹಜ ನಡವಳಿಕೆಗಳ ಅಭ್ಯಾಸವಾಗಿತ್ತು ಎಂದು ರಣಬೀರ್ ಹೇಳಿದ್ದಾರೆ.

“ಶ್ರೀರಾಮ ಯಾರು ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಮುಖ್ಯವಾದ ಭಾಗವಾಗಿತ್ತು. ರಾಮನ ಬಗ್ಗೆ ಎಷ್ಟು ಬೇಕಾದರೂ ಓದಬಹುದು, ಆದರೆ ಆ ಪಾತ್ರಕ್ಕೆ ನಾವು ಎಂತಹ ಆತ್ಮವನ್ನು ತುಂಬುತ್ತೇವೆ ಎಂಬುದು ಮುಖ್ಯ. ನನ್ನೊಳಗಿನ ಆತ್ಮವನ್ನೇ ರಾಮನ ಪಾತ್ರಕ್ಕೆ ನೀಡಿ, ಅದಕ್ಕೊಂದು ಹೊಸ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ” ಎಂದು ರಣಬೀರ್ ಭಾವನಾತ್ಮಕವಾಗಿ ಹೇಳಿದ್ದಾರೆ. ರಾಮಾಯಣವು ಭಾರತೀಯರ ಪ್ರೀತಿಯ ಕಥೆಯಾಗಿರುವುದರಿಂದ ಈ ಸಿನಿಮಾದಲ್ಲಿ ನಟಿಸಿರುವುದು ತಮಗೆ ಅತ್ಯಂತ ವಿಶೇಷ ಮತ್ತು ಹೆಮ್ಮೆಯ ಸಂಗತಿ ಎಂದು ಸಂತಸ ಹಂಚಿಕೊಂಡಿದ್ದಾರೆ.

Must Read

Skip to toolbar