ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಭಾರತದ ರಾಜ್ಯಗಳ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಒಕ್ಕೂಟ ವ್ಯವಸ್ಥೆಯ ಆಶಯದಂತೆ ಚೆನ್ನೈನಲ್ಲಿ ಸುಪ್ರೀಂ ಕೋರ್ಟ್‌ನ ಕಾಯಂ ಪ್ರಾದೇಶಿಕ ಪೀಠವನ್ನು ಸ್ಥಾಪಿಸಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. 1980ರಿಂದಲೂ ಬಾಕಿ ಉಳಿದಿರುವ ಈ ಬೇಡಿಕೆಯನ್ನು ಸುಪ್ರೀಂ ಕೋರ್ಟ್‌ನೊಂದಿಗೆ ಚರ್ಚಿಸಿ ಬಗೆಹರಿಸುವಂತೆ ಅವರು ಪ್ರಧಾನಿಯವರನ್ನು ಕೋರಿದ್ದಾರೆ.
ದಕ್ಷಿಣ ಭಾರತದ ಜನರಿಗೆ ಅನುಕೂಲ
ಸುಪ್ರೀಂ ಕೋರ್ಟ್ ದೆಹಲಿಯಲ್ಲಿದೆ. ಇದರಿಂದಾಗಿ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಕಕ್ಷಿದಾರರು ಹಾಗೂ ಸಾಮಾನ್ಯ ಜನರು ನ್ಯಾಯಕ್ಕಾಗಿ ಅಷ್ಟೊಂದು ದೂರ ಪ್ರಯಾಣಿಸುವುದು ಭೌಗೋಳಿಕವಾಗಿ ಮತ್ತು ಆರ್ಥಿಕವಾಗಿ ಭಾರಿ ಹೊರೆಯಾಗುತ್ತಿದೆ. ಚೆನ್ನೈನಲ್ಲಿ ಪೀಠ ಸ್ಥಾಪನೆಯಾದರೆ ಇಡೀ ದಕ್ಷಿಣ ಭಾರತದ ಜನರಿಗೆ ಅನುಕೂಲವಾಗಲಿದೆ.
ಸಂವಿಧಾನದ ಆಶಯಕ್ಕೆ ಧಕ್ಕೆ
ಸಂವಿಧಾನದ ವಿಧಿ 32ರ ಪ್ರಕಾರ ಪ್ರತಿಯೊಬ್ಬ ಪ್ರಜೆಗೂ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಹಕ್ಕಿದೆ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಭೌಗೋಳಿಕ ಸಾಮೀಪ್ಯ ಹಾಗೂ ಆರ್ಥಿಕ ಶಕ್ತಿ ಇರುವವರು ಮಾತ್ರ ನ್ಯಾಯಾಲಯವನ್ನು ಸುಲಭವಾಗಿ ತಲುಪುತ್ತಿದ್ದಾರೆ. ಇದು ಬಡ ಜನರಿಗೆ ಅನ್ಯಾಯ ಮಾಡಿದಂತಾಗುತ್ತಿದೆ.
ಚೆನ್ನೈನ ಸುದೀರ್ಘ ಕಾನೂನು ಇತಿಹಾಸ
1862ರಲ್ಲೇ ಸ್ಥಾಪನೆಯಾಗಿರುವ ಮದ್ರಾಸ್ ಹೈಕೋರ್ಟ್ ದೇಶದ ಅತ್ಯಂತ ಹಳೆಯ ನ್ಯಾಯಾಲಯಗಳಲ್ಲಿ ಒಂದಾಗಿದೆ. ಇಲ್ಲಿನ ಬಾರ್ ಕೌನ್ಸಿಲ್ ಅತ್ಯುತ್ತಮ ವೃತ್ತಿಪರ ನೈಪುಣ್ಯ ಹೊಂದಿದ್ದು, ದಕ್ಷಿಣದ ರಾಜ್ಯಗಳ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸಲು ಚೆನ್ನೈ ಎಲ್ಲಾ ರೀತಿಯಲ್ಲೂ ಸೂಕ್ತವಾಗಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ವಸತಿ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ತಮಿಳುನಾಡು ಸರ್ಕಾರ ಸಿದ್ಧವಿದೆ.
ಹಳೆಯ ನಿರ್ಧಾರ ಮರುಪರಿಶೀಲಿಸಲು ಆಗ್ರಹ
2007ರಲ್ಲಿ ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠವು ಈ ಪ್ರಾದೇಶಿಕ ಬೆಂಚ್ ಪ್ರಸ್ತಾವನೆಯನ್ನು ತಿರಸ್ಕರಿಸಿತ್ತು. ಆದರೆ, 2004, 2006, 2008 ಮತ್ತು 2021ರ ಸಂಸದೀಯ ಸ್ಥಾಯೀ ಸಮಿತಿಗಳು ಹಾಗೂ ಕಾನೂನು ಆಯೋಗದ ವರದಿಗಳು ಪ್ರಾದೇಶಿಕ ಪೀಠಗಳ ಅಗತ್ಯತೆಯನ್ನು ಪುನರುಚ್ಚರಿಸಿವೆ. ಅಲ್ಲದೆ, 2016ರ ರಿಟ್ ಅರ್ಜಿಯೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಸಂವಿಧಾನ ಪೀಠಕ್ಕೂ ಈ ವಿಷಯವನ್ನು ಉಲ್ಲೇಖಿಸಲಾಗಿತ್ತು ಎಂಬುದನ್ನು ಸಿಎಂ ವಿಜಯ್ ನೆನಪಿಸಿದ್ದಾರೆ.
ಇದನ್ನೂ ಓದಿ:
ಪ್ರಾದೇಶಿಕ ಪೀಠ ಸ್ಥಾಪನೆಯಿಂದ ನ್ಯಾಯಾಂಗದ ಸ್ವಾಯತ್ತತೆಗೆ ಯಾವುದೇ ಧಕ್ಕೆ ಬರುವುದಿಲ್ಲ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೇ ಇದರ ಆಡಳಿತಾತ್ಮಕ ನಿಯಂತ್ರಣ ಹೊಂದಿರಲಿದ್ದಾರೆ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ವಿಜಯ್, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಕ್ಷಣವೇ ಸುಪ್ರೀಂ ಕೋರ್ಟ್‌ನೊಂದಿಗೆ ಹೊಸದಾಗಿ ಮಾತುಕತೆ ನಡೆಸಿ ಸಕಾರಾತ್ಮಕ ನಿರ್ಧಾರ ಹೊರಬೀಳುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.



