November 5, 2026
Thursday, November 5, 2026
spot_img

ಕೇವಲ 90 ರೂ. ಚಿಲ್ಲರೆಗಾಗಿ ಬಲಿಯಾಯಿತೇ ಮಹಿಳಾ ಬಸ್‌ ಕಂಡಕ್ಟರ್ ಜೀವ? ಬಸ್‌ನಿಂದ ತಳ್ಳಿದ್ದು ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರೀ 90 ರೂಪಾಯಿಗಾಗಿ ಜೀವವೇ ಹೋಯ್ತು ಅಂದರೆ ನಂಬುತ್ತೀರಾ? ಹೌದು, ಬರೀ 90 ರೂಪಾಯಿಗಾಗಿ ಮಾತಿಗೆ ಮಾತು ಬೆಳೆದು ಮಹಿಳಾ ಕಂಡಕ್ಟರ್‌ ಪ್ರಾಣ ಬಿಟ್ಟಿರುವ ಘಟನೆ ತೆಲಂಗಾಣದ ಮಿಟ್ಟಗುಡೆಂ ಎಂಬ ಹಳ್ಳಿಯಲ್ಲಿ ನಡೆದಿದೆ.

24 ವರ್ಷ ಗುಂಡ್ಲ ಪ್ರವಲಿಕಾ ಮೃತ ಮಹಿಳಾ ಕಂಡಕ್ಟರ್‌. ಪ್ಯಾಸೆಂಜರ್‌ ಹಾಗೂ ಮಹಿಳಾ ಕಂಡಕ್ಟರ್‌ ನಡುವೆ ನಡೆದ ಮಾತುಕತೆ ಜಗಳದಲ್ಲಿ ಪ್ರವಲಿಕಾ ಬಸ್‌ನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಘಟನೆ ಹಿನ್ನೆಲೆ ಏನು?

ಹತ್ತು ದಿನಗಳ ಹಿಂದೆ ಪ್ರವಲಿಕಾ ಮಿಟ್ಟಗುಡೆಂ ಎಂಬ ಹಳ್ಳಿಯ ಬಳಿ ಪ್ಯಾಸೆಂಜರ್‌ ಮೌನಿಕಾ ಎನ್ನುವವರನ್ನು ಬಸ್‌ಗೆ ಹತ್ತಿಸಿಕೊಂಡಿದ್ದರು. ಮೌನಿಕಾ ತಮ್ಮ ಮಗನ ಜೊತೆ ಬಂದಿದ್ದರು. ಮಗನಿಗೆ ಟಿಕೆಟ್‌ ಪಡೆಯಲು ನೂರು ರೂಪಾಯಿ ನೀಡಿ, 90 ರೂಪಾಯಿ ಚಿಲ್ಲರೆ ಕೊಡುವಂತೆ ಕೇಳಿದ್ದರು. ಈಗ ಚಿಲ್ಲರೆ ಇಲ್ಲ, ಜನ ಬಂದಂತೆ ಚಿಲ್ಲರೆ ಸಿಗುತ್ತದೆ ಆಗ ಕೊಡುತ್ತೇನೆ ಎಂದು ಪ್ರವಲಿಕಾ ಹೇಳಿದ್ದರು. ಟಿಕೆಟ್‌ ಹಿಂಬದಿಯಲ್ಲಿ 90 ರೂಪಾಯಿ ಬಾಕಿ ಇದೆ ಎಂದು ಬರೆದು ಪ್ರವಲಿಕಾ ಟಿಕೆಟ್‌ ನೀಡಿದ್ದರು. ಇದಕ್ಕೆ ಮೌನಿಕಾ ಒಪ್ಪಲಿಲ್ಲ. ಈಗಲೇ ಹಣ ನೀಡಿ ಎಂದು ಜೋರುದನಿಯಲ್ಲಿ ಮಾತನಾಡಿದ್ದಾರೆ.

ಮಾತಿಗೆ ಮಾತು ಬೆಳೆದು ಸಿಟ್ಟಿನಲ್ಲಿ ಪ್ಯಾಸೆಂಜರ್‌ ಮೌನಿಕಾ ಕಂಡಕ್ಟರ್‌ ಪ್ರವಲಿಕಾ ಅವರನ್ನು ಚಲಿಸುತ್ತಿರುವ ಬಸ್‌ನಿಂದ ತಳ್ಳಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಸ್‌ನಿಂದ ಕೆಳಕ್ಕೆ ಬಿದ್ದ ಪ್ರವಲಿಕಾ ಕಾಲಿನ ಮೇಲೆ ಬಸ್‌ನ ಎರಡು ಚಕ್ರ ಹರಿದಿದೆ. ಬಲಗಾಲಿನ ಮೂಳೆಗಳು ಜಜ್ಜಿಹೋಗಿವೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹತ್ತು ದಿನಗಳ ಚಿಕಿತ್ಸೆ ಫಲಕಾರಿಯಾಗದೇ ಪ್ರವಲಿಕಾ ಪ್ರಾಣಬಿಟ್ಟಿದ್ದಾರೆ.

ಇದಾದ ನಂತರ ತಳ್ಳಿದ ಪ್ಯಾಸೆಂಜರ್‌ಗೆ ಏನಾಯ್ತು ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಬರೀ ಚಿಲ್ಲರೆಗಾಗಿ ತಾಳ್ಮೆ ಕಳೆದುಕೊಂಡು ಈ ರೀತಿ ಮಾಡಿದವರನ್ನು ಸುಮ್ಮನೆ ಬಿಡಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ ಮಾಡಲಾಗುತ್ತಿದೆ. ಮಹಿಳೆಯ ಮೇಲೆ ಮಹಿಳೆಯರೇ ಇಂಥ ದೌರ್ಜನ್ಯಗಳನ್ನು ಎಸಗುವುದನ್ನು ಖಂಡಿಸುತ್ತೇವೆ. ತಂದೆಯ ಸಾವಿನ ನಂತರ ಅಪ್ಪನ ಕೆಲಸವನ್ನು ಮಾಡಿ ಮನೆ ನಡೆಸುತ್ತಿದ್ದ ಮಗಳು ದುರಂತ ಅಂತ್ಯ ಕಂಡಿದ್ದಾಳೆ. ಈ ಘಟನೆಗೆ ಯಾರು ಹೊಣೆ? ಕುಟುಂಬಕ್ಕೆ ಯಾರು ಆಸರೆ ಎನ್ನುವ ಪ್ರಶ್ನೆಗಳು ಜನರ ನೆಮ್ಮದಿ ಕೆಡಿಸಿವೆ.

Must Read