ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಹತ್ತಿರದಲ್ಲಿರುವ ನಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಾಂಸದ ತ್ಯಾಜ್ಯದ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ರಸ್ತೆ ಬದಿಗಳು ಹಾಗೂ ರಾಜಕಾಲುವೆಗಳಲ್ಲಿ ಕಾನೂನುಬಾಹಿರವಾಗಿ ಮಾಂಸದ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಇಡೀ ಗ್ರಾಮವೇ ನರಕಸದೃಶವಾಗಿದೆ. ಇದರಿಂದ ಹರಡುತ್ತಿರುವ ಭೀಕರ ದುರ್ವಾಸನೆಯಿಂದಾಗಿ ಸಾರ್ವಜನಿಕರು ತತ್ತರಿಸಿದ್ದಾರೆ.
ರನ್-ವೇ ಹತ್ತಿರವೇ ಹದ್ದುಗಳ ದರ್ಬಾರ್
ನಲ್ಲೂರು ಗ್ರಾಮವು ಏರ್ಪೋರ್ಟ್ ಸನಿಹದಲ್ಲೇ ಇರುವುದರಿಂದ ವಿಮಾನಗಳು ಇಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತವೆ. ರಸ್ತೆ ಬದಿ ಬಿದ್ದಿರುವ ಮಾಂಸದ ತ್ಯಾಜ್ಯಗಳನ್ನು ತಿನ್ನಲು ನೂರಾರು ಹದ್ದುಗಳು ಈ ಭಾಗದಲ್ಲಿ ಬೀಡು ಬಿಟ್ಟಿವೆ. ವಿಮಾನಗಳು ಟೇಕ್-ಆಫ್ ಹಾಗೂ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಈ ಹದ್ದುಗಳು ವಿಮಾನಕ್ಕೆ ಡಿಕ್ಕಿ ಹೊಡೆಯುವ ಭೀತಿ ಎದುರಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಕಂಟಕ ಎದುರಾಗಿದೆ.
ಬೈಕ್ ಸವಾರರ ಮೇಲೆ ನಾಯಿಗಳ ಅಟ್ಯಾಕ್
ಮಾಂಸದ ತುಂಡುಗಳಿಗಾಗಿ ನಾಯಿಗಳ ಹಿಂಡೇ ರಸ್ತೆ ಬದಿ ಜಮಾಯಿಸುತ್ತಿದೆ. ಈ ಬೀದಿನಾಯಿಗಳು ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚಲು ಬರುತ್ತಿವೆ. ನಾಯಿಗಳ ಕಾಟಕ್ಕೆ ಹೆದರಿ ಬೈಕ್ನಿಂದ ಬಿದ್ದು ಈಗಾಗಲೇ ಹಲವು ಸವಾರರು ಕೈಕಾಲು ಮುರಿದುಕೊಂಡಿದ್ದಾರೆ.
ಕೈಗಾರಿಕಾ ಪ್ರಗತಿಯೇ ಶಾಪವಾಯಿತೇ?
ಏರ್ಪೋರ್ಟ್ ಮತ್ತು ಸುತ್ತಮುತ್ತಲಿನ ಕೆಐಎಡಿಬಿ ಕೈಗಾರಿಕಾ ಪ್ರದೇಶದ ಬೆಳವಣಿಗೆಯಿಂದಾಗಿ ನಲ್ಲೂರು ಗ್ರಾಮದಲ್ಲಿ ಜನಸಂಖ್ಯೆ ದಿಢೀರ್ ಏರಿಕೆಯಾಗಿದೆ. ಜನವಸತಿ ಹೆಚ್ಚಾದಂತೆ ಇಲ್ಲಿ ಹೋಟೆಲ್ಗಳು ಮತ್ತು ಚಿಕನ್, ಮಟನ್ ಅಂಗಡಿಗಳ ಸಂಖ್ಯೆಯೂ ದುಪ್ಪಟ್ಟಾಗಿದೆ. ಆದರೆ, ಈ ಅಂಗಡಿಗಳ ಮಾಲೀಕರು ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ರಾಜಕಾಲುವೆಗಳಿಗೆ ಎಸೆಯುತ್ತಿದ್ದಾರೆ. ಮಳೆ ಬಂದರೆ ಈ ಕೊಳೆತ ಮಾಂಸದ ನೀರೆಲ್ಲಾ ಸ್ಥಳೀಯ ಕೆರೆ ಹಾಗೂ ರೈತರ ತೋಟಗಳಿಗೆ ನುಗ್ಗುವ ಭೀತಿ ಇದೆ.
ಇದನ್ನೂ ಓಸಿ:
ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಹತ್ತಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಮುಂದೆ ದೊಡ್ಡ ಅನಾಹುತ, ರೋಗರುಜಿನಗಳು ಹರಡುವ ಮುನ್ನ ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಈ ಮಾಂಸದ ದಂಧೆಗೆ ಬ್ರೇಕ್ ಹಾಕಬೇಕಿದೆ.



