ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಫುಟ್ಬಾಲ್‌ನಲ್ಲಿ ದಾಖಲೆಗಳ ಸರದಾರ, ಅಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಡಿಯೋ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ರೊನಾಲ್ಡೊ, 23 ವರ್ಷಗಳ ಸುದೀರ್ಘ ಐತಿಹಾಸಿಕ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
‘ನಂ.7’ ಜರ್ಸಿಗೆ ಭಾವನಾತ್ಮಕ ವಿದಾಯ
ಪೋರ್ಚುಗಲ್ ತಂಡದ ಏಳನೇ ಸಂಖ್ಯೆಯ ಜರ್ಸಿಯನ್ನು ಮರಳಿಸುವ ಸಮಯ ಬಂದಿದೆ. ಈ ಜರ್ಸಿ ನನ್ನೊಬ್ಬನಿಗೆ ಮಾತ್ರ ಸೇರಿದ್ದಲ್ಲ. 23 ವರ್ಷಗಳ ಕಾಲ ಅದನ್ನು ಧರಿಸುವ, ರಕ್ಷಿಸುವ ಮತ್ತು ದೇಶದ ಪರವಾಗಿ ಮೈದಾನಕ್ಕಿಳಿಯುವ ಗೌರವ ಹಾಗೂ ಜವಾಬ್ದಾರಿ ನನಗೆ ಸಿಕ್ಕಿತ್ತು ಎಂದು ರೊನಾಲ್ಡೊ ಭಾವುಕರಾಗಿ ಹೇಳಿದ್ದಾರೆ.
2003ರ ಆಗಸ್ಟ್‌ನಲ್ಲಿ ಆರಂಭವಾದ ಅವರ ಅಂತಾರಾಷ್ಟ್ರೀಯ ಪಯಣ ಈಗ ಅಂತ್ಯಗೊಂಡಿದೆ. ಈ ನಿರ್ಧಾರ ಸುಲಭವಾಗಿರಲಿಲ್ಲ. ಆದರೆ ಮುಂದಿನ ಪೀಳಿಗೆಗೆ ಅವಕಾಶ ನೀಡುವ ಸಮಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ದಾಖಲೆಗಳೊಂದಿಗೆ ವಿದಾಯ
ರೊನಾಲ್ಡೊ ಪೋರ್ಚುಗಲ್ ಪರ 234 ಪಂದ್ಯಗಳಲ್ಲಿ 146 ಗೋಲು ಗಳಿಸಿ, ಅಂತಾರಾಷ್ಟ್ರೀಯ ಫುಟ್ಬಾಲ್‌ನ ಸಾರ್ವಕಾಲಿಕ ಗರಿಷ್ಠ ಗೋಲು ಗಳಿಸಿದ ಆಟಗಾರ ಹಾಗೂ ಅತ್ಯಧಿಕ ಪಂದ್ಯಗಳನ್ನಾಡಿದ ಆಟಗಾರ ಎಂಬ ದಾಖಲೆಗಳೊಂದಿಗೆ ವಿದಾಯ ಹೇಳುತ್ತಿದ್ದಾರೆ. ಐದು ಬಾರಿ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗೆದ್ದಿರುವ ಅವರು, ಆರು ವಿಶ್ವಕಪ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ ಅಪರೂಪದ ಸಾಧನೆ ಮಾಡಿದ್ದಾರೆ. ವಿಶ್ವಕಪ್‌ನ ಆರು ಆವೃತ್ತಿಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.
ಇದನ್ನೂ ಓದಿ:
ಪೋರ್ಚುಗಲ್‌ಗೆ ಮರೆಯಲಾಗದ ಕೊಡುಗೆ
2016ರ ಯುರೋ ಕಪ್ ಗೆಲುವಿನಲ್ಲಿ ರೊನಾಲ್ಡೊ ಪ್ರಮುಖ ಪಾತ್ರ ವಹಿಸಿದ್ದರು. ಜೊತೆಗೆ ಎರಡು ಯುಇಎಫ್‌ಎ ನೇಷನ್ಸ್ ಲೀಗ್ ಪ್ರಶಸ್ತಿಗಳನ್ನೂ ತಂಡ ಗೆದ್ದಿದೆ. ಆದರೆ ವಿಶ್ವಕಪ್ ಪ್ರಶಸ್ತಿ ಮಾತ್ರ ಅವರ ಕೈಗೆಟುಕದ ಕನಸಾಗಿಯೇ ಉಳಿದಿದೆ.
ಅಭಿಮಾನಿಗಳಿಗಾಗಿ ವಿಶೇಷ ಗೌರವ
ರೊನಾಲ್ಡೊಗೆ ಭವ್ಯ ವಿದಾಯ ಗೌರವ ಸಮಾರಂಭ ಆಯೋಜಿಸಲು ಪೋರ್ಚುಗಲ್ ಫುಟ್ಬಾಲ್ ಫೆಡರೇಷನ್ ನಿರ್ಧರಿಸಿದೆ. ಅಭಿಮಾನಿಗಳು ಮತ್ತು ದೇಶದ ಜನರು ತಮ್ಮ ನೆಚ್ಚಿನ ಆಟಗಾರನ ಸಾಧನೆಗಳನ್ನು ಮತ್ತೊಮ್ಮೆ ಸಂಭ್ರಮಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಫೆಡರೇಷನ್ ತಿಳಿಸಿದೆ.
https://www.instagram.com/reel/DfWzUuNAeGd/?utm_source=ig_embed&ig_rid=AQ5ewt2_BYcE_fsCgxyhTgf



