November 5, 2026
Thursday, November 5, 2026
spot_img

ಸೆಲೆಬ್ರಿಟಿಗಳ ಭಯ, ಪಿಆರ್ ಟೀಮ್‌ಗಳ ಹಾವಳಿ: ಎರಡು ದಶಕಗಳ ‘ಟಾಕ್ ಶೋ’ ನಿಲ್ಲಿಸಲು ಇದೇನಾ ಕಾರಣ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2004ರಲ್ಲಿ ಆರಂಭವಾಗಿ ಬಾಲಿವುಡ್ ತಾರೆಯರ ಖಾಸಗಿ ವಿಚಾರಗಳು ಹಾಗೂ ಮಸಾಲಾ ಮಾತುಗಳಿಂದಲೇ ಸದ್ದು ಮಾಡಿದ್ದ ‘ಕಾಫಿ ವಿತ್ ಕರಣ್’ ಟಾಕ್ ಶೋ ಈಗ ತನ್ನ ಅಂತಿಮ ಹಂತಕ್ಕೆ ತಲುಪಿದೆ. ಈ ಜನಪ್ರಿಯ ಕಾರ್ಯಕ್ರಮದ ಪ್ರಸ್ತುತ ಸೀಸನ್ (ಸೀಸನ್ 9) ಕೊನೆಯದ್ದು ಎಂದು ನಿರ್ಮಾಪಕ ಹಾಗೂ ನಿರೂಪಕ ಕರಣ್ ಜೋಹರ್ ಅಧಿಕೃತವಾಗಿ ಘೋಷಿಸಿದ್ದಾರೆ. ಎರಡು ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ ಈ ಶೋಗೆ ವಿದಾಯ ಹೇಳುತ್ತಿರುವುದು ಅಭಿಮಾನಿಗಳಲ್ಲಿ ತೀವ್ರ ಬೇಸರ ತರಿಸಿದೆ.

ಈ ಕಾರ್ಯಕ್ರಮವು ಬಾಲಿವುಡ್‌ನ ಪಾಪ್ ಸಂಸ್ಕೃತಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದರೆ, ಇದು ತಂದಿಟ್ಟ ವಿವಾದಗಳು ಸಣ್ಣದೇನಲ್ಲ. ಹಾರ್ದಿಕ್ ಪಾಂಡ್ಯ-ಕೆ.ಎಲ್. ರಾಹುಲ್ ಅವರ ಸಂಭಾಷಣೆಯಿರಲಿ ಅಥವಾ ಆಲಿಯಾ ಭಟ್ ಅವರ ಪ್ರೆಸಿಡೆಂಟ್ ಕುರಿತ ಉತ್ತರವಿರಲಿ, ಹಲವು ಬಾರಿ ಈ ಶೋ ತಾರೆಯರನ್ನು ದೊಡ್ಡ ಮಟ್ಟದ ವಿವಾದಕ್ಕೆ ಸಿಲುಕಿಸಿತ್ತು.

ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರಣ್ ಜೋಹರ್, ಶೋ ನಿಲ್ಲಿಸಲು ಹಾಗೂ ಇತ್ತೀಚಿನ ಸೀಸನ್‌ಗಳಲ್ಲಿ ಕಿಕ್ ಕಡಿಮೆಯಾಗಲು ಕಾರಣಗಳನ್ನು ಹಂಚಿಕೊಂಡಿದ್ದಾರೆ. “ಆರಂಭದ ದಿನಗಳಲ್ಲಿ ಸೆಟ್‌ನಲ್ಲಿ ಯಾರೂ ಇರುತ್ತಿರಲಿಲ್ಲ. ಆದರೆ ಈಗ ತಾರೆಯರ ಜೊತೆ ಮ್ಯಾನೇಜರ್‌ಗಳು, ಪಿಆರ್ ಟೀಮ್ ಹಾಗೂ ದೊಡ್ಡ ಪಡೆಯೇ ಬರುತ್ತದೆ. ತಾವಾಡುವ ಸಣ್ಣ ಮಾತು ಕೂಡ ದೊಡ್ಡ ವಿವಾದವಾಗಿ ಪಿಆರ್ ಸಮಸ್ಯೆಯಾಗಬಹುದು ಎಂಬ ಭಯ ನಟ-ನಟಿಯರಲ್ಲಿದೆ. ಹೀಗಾಗಿ ಈಗ ಯಾರೂ ಮುಕ್ತವಾಗಿ ಮಾತನಾಡುವುದಿಲ್ಲ. ಕಾಫಿಯ ಬಿಸಿ ಈಗ ಕಡಿಮೆಯಾಗಿದೆ” ಎಂದು ಕರಣ್ ಹೇಳಿದ್ದಾರೆ.

ಸಂಸಾರ ಅಥವಾ ವೃತ್ತಿಜೀವನಕ್ಕೆ ಧಕ್ಕೆಯಾಗಬಾರದು ಎಂದು ತಾರೆಯರು ಈಗ ಎಪಿಸೋಡ್ ಪ್ರಸಾರವಾಗುವ ಮುನ್ನ ‘ಪೋಸ್ಟ್-ಎಡಿಟ್’ ಪರಿಶೀಲನೆಗೆ ಮನವಿ ಮಾಡುತ್ತಿದ್ದಾರೆ. “ಅವರ ಜಾಗದಲ್ಲಿ ನಾನಿದ್ದರೂ ಇದೇ ರೀತಿ ಜಾಗರೂಕರಾಗಿರುತ್ತಿದ್ದೆ” ಎಂದು ತಾರೆಯರ ಈ ಮುನ್ನೆಚ್ಚರಿಕೆಯನ್ನು ಕರಣ್ ಸಮರ್ಥಿಸಿಕೊಂಡಿದ್ದಾರೆ.

ಕರಣ್ ಅವರ ಈ ನಿರ್ಧಾರ ಬಾಲಿವುಡ್ ಟಾಕ್ ಶೋ ಇತಿಹಾಸದಲ್ಲೊಂದು ದೊಡ್ಡ ಅಧ್ಯಾಯದ ಅಂತ್ಯಕ್ಕೆ ನಾಂದಿ ಹಾಡಿದೆ.

Must Read

Skip to toolbar