ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳ್ಳಿಪರದೆಯ ಮೇಲೆ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಬಂದಿದ್ದು, ಪ್ರೇಕ್ಷಕರಿಂದ ಹಾಗೂ ಚಿತ್ರರಂಗದ ಪ್ರಮುಖರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ. ಭಾರತೀಯ ಸಿನಿಮಾರಂಗದ ಚಾಣಾಕ್ಷ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರು ಸಾಮಾಜಿಕ ಜಾಲತಾಣ ‘X’ ಮೂಲಕ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದು, ಚಿತ್ರದ ದೃಶ್ಯವೈಭವ ಹಾಗೂ ನಟರ ಅಭಿನಯವನ್ನು ಕೊಂಡಾಡಿದ್ದಾರೆ.
ಚಿತ್ರದ ಮೇಕಿಂಗ್ ಹಾಗೂ ವಿಶ್ಯುವಲ್ಸ್ ಕುರಿತು ಬರೆದುಕೊಂಡಿರುವ ರಾಜಮೌಳಿ, “#Ramayana… ಬೆಳ್ಳಿಪರದೆಯ ಮೇಲೆ ಚಿತ್ರದ ಬೃಹತ್ ಪ್ರಮಾಣ ಮತ್ತು ದೃಶ್ಯಗಳು ನೋಡಲು ಅತ್ಯಂತ ಭವ್ಯವಾಗಿವೆ” ಎಂದು ಬಣ್ಣಿಸಿದ್ದಾರೆ. ನಿತೀಶ್ ತಿವಾರಿ ನಿರ್ದೇಶನ ಹಾಗೂ ನಮಿತ್ ಮಲ್ಹೋತ್ರಾ ಅವರ ನಿರ್ಮಾಣದ ಈ ಮಹತ್ವಾಕಾಂಕ್ಷೆಯ ಕಲ್ಪನೆಯನ್ನು ಪರದೆಯ ಮೇಲೆ ಅತ್ಯಂತ ಸುಂದರವಾಗಿ ತಂದಿದ್ದಕ್ಕಾಗಿ ಅವರು ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪಾತ್ರಧಾರಿಗಳ ನಟನೆಯನ್ನು ಮುಕ್ತಕಂಠದಿಂದ ಹೊಗಳಿದ ಅವರು, “ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್, ವಿಶೇಷವಾಗಿ ವನವಾಸದ ಭಾಗದಿಂದ ಅತ್ಯಂತ ಶಾಂತ ಹಾಗೂ ಗಂಭೀರವಾಗಿ ಕಂಗೊಳಿಸಿದ್ದಾರೆ” ಎಂದಿದ್ದಾರೆ. ರಾವಣನಾಗಿ ಅಭಿನಯಿಸಿರುವ ರಾಕಿಂಗ್ ಸ್ಟಾರ್ ಯಶ್ ತಮ್ಮ ವಿಲನ್ತನದ ಕೆಡುಕಿನ ಉಪಸ್ಥಿತಿಯಿಂದ ಗೂಸ್ಬಂಪ್ಸ್ ತಂದರೆ, ಸೀತೆಯಾಗಿ ಸಾಯಿ ಪಲ್ಲವಿ ಅತ್ಯಂತ ನಯ- ವಿನಯದಿಂದ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರಿ-ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ದೃಶ್ಯಗಳ ಪ್ರತಿಯೊಂದು ಕ್ಷಣವನ್ನೂ ಆನಂದಿಸಿದೆ ಎಂದು ತಿಳಿಸಿದ್ದಾರೆ.
ಪ್ರತಿ ಭಾರತೀಯ ಕಥೆಗಾರನಿಗೂ ರಾಮಾಯಣವನ್ನು ಪರದೆಯ ಮೇಲೆ ತರುವ ಆಸೆಯಿರುತ್ತದೆ ಎಂದು ಹೇಳಿದ್ದ ರಾಜಮೌಳಿ, ಪ್ರಸ್ತುತ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅಭಿನಯದ ‘ವಾರಣಾಸಿ’ ಚಿತ್ರದ ಕೆಲಸಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ತಮ್ಮ ಪ್ರತಿಯೊಂದು ಸಿನಿಮಾಗೂ ಶ್ರೀರಾಮನ ಕಾವ್ಯವೇ ಪ್ರೇರಣೆ. ಈ ‘ವಾರಣಾಸಿ’ ಸಿನಿಮಾದಲ್ಲಿ ರಾಮಾಯಣದ ಒಂದು ಪ್ರಮುಖ ಘಟನೆಯನ್ನೇ ಆಧರಿಸಿ ದೃಶ್ಯಾವಳಿಗಳನ್ನು ರೂಪಿಸುತ್ತಿರುವುದಾಗಿ ಬಹಿರಂಗಪಡಿಸಿದ್ದರು.



